ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೇವಲ 42 ದಿನ ಬಾಕಿ ಇದ್ದು, ಪ್ರತಿ ಕ್ಷಣವೂ ಅಮೂಲ್ಯವಾಗಿದೆ. ಮಾತೃಭಾಷೆ ಕನ್ನಡದಲ್ಲಿ ಶೇ.100ರಷ್ಟು ಸಾಧನೆ ಮಾಡಲು ಬರವಣಿಗೆ ಉತ್ತಮಪಡಿಸಿಕೊಳ್ಳುವುದು ಅಗತ್ಯವಾಗಿದೆ. ಸಮಯ ವ್ಯರ್ಥ ಮಾಡದೇ ಓದಿ ಎಂದು ಡಿಡಿಪಿಐ ಕಚೇರಿ ಕನ್ನಡ ವಿಷಯ ಪರಿವೀಕ್ಷಕ ಶಂಕರೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ನಡೆಸಿ, ಪರೀಕ್ಷಾ ಸಿದ್ಧತೆಗಳ ಕುರಿತು ಮಾರ್ಗದರ್ಶನ ನೀಡಿದ ಅವರು, ಮಾತೃಭಾಷೆ ಕನ್ನಡದಲ್ಲಿ ಅನುತ್ತೀರ್ಣರಾದರೆ ಅದು ನಿಜಕ್ಕೂ ಬೇಸರದ ಸಂಗತಿ. ನೀವು ಓದುವುದರ ಜೊತೆಗೆ ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರವನ್ನು ಬರೆದು ಅಭ್ಯಾಸ ಮಾಡಿ, ಅದರಿಂದ ಬರವಣಿಗೆಯೂ ಉತ್ತಮಗೊಳ್ಳುತ್ತದೆ ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯಪಡುವ ಅಗತ್ಯವಿಲ್ಲ, ಚೆನ್ನಾಗಿ ಓದಿ ಸಿದ್ಧವಾದವರಿಗೆ ಭಯ ಏಕೆ ಎಂದು ಪ್ರಶ್ನಿಸಿದರು. ಪಠ್ಯಕ್ರಮ ಪೂರ್ಣಗೊಂಡಿರುವುದನ್ನು ಖಾತ್ರಿ ಮಾಡಿಕೊಂಡು, ನೈಜಗುರಿ ಸಾಧನೆಗೆ ಓದು ಮುಂದುವರಿಸಿ ಎಂದು ಸಲಹೆ ನೀಡಿದರು.ಕಲಿಕೆಯಲ್ಲಿ ಶಿಸ್ತು ಇರಬೇಕು, ಶಾಲೆ ಮತ್ತು ಮನೆಯಲ್ಲಿ ಕಾಲಹರಣ ಮಾಡಬಾರದು ಎಂದು ಸಲಹೆ ನೀಡಿ, ಎಸ್ಸೆಸ್ಸೆಲ್ಸಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯಾಗಿದೆ, ಇದರಿಂದ ನಿಮ್ಮಲ್ಲಿ ಭಯ ಸಹಜ, ಆದರೆ ನೀವು ಕಲಿಕೆಯಲ್ಲಿ ದೃಢತೆ ಸಾಧಿಸಿದರೆ ನೀವು ಹೆದರುವ ಅಗತ್ಯವೇ ಇಲ್ಲ, ಅದಕ್ಕಾಗಿಯೇ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ನಿಮ್ಮಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ, ಫೆ.25 ರಿಂದ ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷೆಗಳು ನಡೆಯಲಿವೆ ಎಂದರು.
ಪಠ್ಯದಲ್ಲಿನ ಪ್ರತಿ ಪ್ರಶ್ನೆಗೂ ಉತ್ತರಿಸುವ ಶಕ್ತಿ ನಿಮಗೆ ಬಂದರೆ, ಹೆದರಿಕೆ ನಿಮ್ಮಿಂದ ತಾನಾಗಿಯೇ ದೂರವಾಗುತ್ತದೆ. ನಿತ್ಯ ವೇಳಾಪಟ್ಟಿ ಹಾಕಿಕೊಂಡು ಅಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು. ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ನೀವು ಉತ್ತರಿಸಲು ಸಿದ್ಧರಾಗಿರಬೇಕು. ಅದಕ್ಕೆ ಪರಿಶ್ರಮ ಅಗತ್ಯವಿದೆ. ಕ್ರೀಡೆ, ಆಟ,ಸಿನಿಮಾ ಎಲ್ಲವನ್ನೂ ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ, ನಿಮ್ಮ ಗುರಿ ಕೇವಲ ಉತ್ತಮ ಫಲಿತಾಂಶದತ್ತ ಇರಲಿ ಎಂದರು.ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ಜೊತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ತಾಹೇರಾ ನುಸ್ರುತರ ಮಾತನಾಡಿದರು.ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣ, ಶ್ವೇತಾ, ಲೀಲಾ, ರಮಾದೇವಿ, ಶ್ರೀನಿವಾಸಲು, ಚಂದ್ರಶೇಖರ್ ಇದ್ದರು.