ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏ.19 ರಿಂದ 27 ರವರೆಗೆ ಅಗ್ನಿವೀರ್ ರ್ಯಾಲಿ ನಡೆಯಲಿದ್ದು, 6235 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನ ಭಾರತೀಯ ಸೇನೆ ನೇಮಕಾತಿ ಅಧಿಕಾರಿ ಕರ್ನಲ್ ವಿವೇಕ್ ಜಮದರ್ ತಿಳಿಸಿದರು.ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಗ್ನಿವೀರ್ ರ್ಯಾಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಳೆದ ಸಾಲಿನ ಜೂನ್ ಮಾಹೆಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಎರಡನೇ ಹಂತದ (ಸ್ಕ್ರೀನಿಂಗ್ ಪರೀಕ್ಷೆ) ಅಗ್ನಿ ವೀರ್ ರ್ಯಾಲಿ ಪರೀಕ್ಷೆ ಏ.19 ರಿಂದ ನಡೆಯಲಿದೆ ಎಂದರು.ರ್ಯಾಲಿಯಲ್ಲಿ 6043 ಪುರುಷ ಹಾಗೂ 192 ಮಹಿಳಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ 800 ಅಭ್ಯರ್ಥಿಗಳ ದೈಹಿಕ ಸೇರಿದಂತೆ ಇತರೆ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಏ.27 ರಂದು ಮಹಿಳಾ ಅಭ್ಯರ್ಥಿಗಳ ರ್ಯಾಲಿ ನಡೆಯಲಿದೆ ಎಂದು ಹೇಳಿದರು.ಈ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದವರು ಮಾತ್ರ ವೈದ್ಯಕೀಯ ಪರೀಕ್ಷೆಗೆ ಹಾಜರಾಗುತ್ತಾರೆ. ಒಬ್ಬ ಅಭ್ಯರ್ಥಿಯು ಒಂದರಿಂದ ಎರಡು ದಿನಗಳು ಮಾತ್ರ ವಾಸ್ತವ್ಯ ಮಾಡಲಿದ್ದಾರೆ. ರ್ಯಾಲಿ ನಡೆಯುವ ದಿನದಂದು ಆರೋಗ್ಯ ಇಲಾಖೆಯಿಂದ ಅಂಬ್ಯೂಲೆನ್ಸ್, ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು. ನಗರ ಪಾಲಿಕೆ ವತಿಯಿಂದ ಕುಡಿಯುವ ನೀರು, ತಾತ್ಕಲಿಕ ಶೌಚಾಲಯ, ಸ್ವಚ್ಛತಾ ವ್ಯವಸ್ಥೆ, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ, ನಿರ್ಮಿತಿ ಕೇಂದ್ರದ ವತಿಯಿಂದ ಅಗತ್ಯ ಟೆಂಟ್ ಗಳು ಹಾಗೂ ಸಿಸಿಟಿವಿ ವ್ಯವಸ್ಥೆ ಮಾಡುವಂತೆ ಹೇಳಿದರು.ಭಾರತೀಯ ಸೇನೆಯಲ್ಲಿ ಅಂದಾಜು 2030ನೇ ಸಾಲಿನವರೆಗೆ ಹೆಚ್ಚಿನ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಯುವ ಜನರು ಹೆಚ್ಚಿನಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ. ಜಿಲ್ಲೆಯಲ್ಲಿ ನಡೆಯಲಿರುವ ರ್ಯಾಲಿ ವೀಕ್ಷಿಸಲು ಪ್ರೌಢಶಾಲೆಯ ವಿದ್ಯಾರ್ಥಿಗಳು, ಎನ್ ಸಿಸಿ , ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದರಿಂದ ವಿದ್ಯಾರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳವಳಿಕೆ ಹಾಗೂ ಸೇನೆ ಸೇರುವ ಬಗ್ಗೆ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಭಾಗವಹಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆಯುವಂತೆ ತಿಳಿಸಿದರು.ಭಾರತೀಯ ಸೇನೆಯ ನೇಮಕಾತಿ ವಿಭಾಗದ ವೈದ್ಯಕೀಯ ಅಧಿಕಾರಿ ಮೇಜರ್ ಕಪಿಲ್ ಕುಮಾರ್ ಶರ್ಮ, ಉಪ ನೇಮಕಾತಿ ಅಧಿಕಾರಿ ಸುಬೇದಾರ್ ಮೇಜರ್ ಶಾಮ್ ಸಿಂಗ್, ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೆಡ್ಡಿ, ಆರೋಗ್ಯ ಇಲಾಖೆಯ ಡಾ. ಗೋಪಿನಾಥ್, ಯುವಜನ ಸೇವ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಾಸ್ಕರ್ ನಾಯಕ್ ಮೊದಲಾದವರು ಇದ್ದರು.19 ರಿಂದ ಅಗ್ನಿವೀರ್ ರ್ಯಾಲಿ, 6235 ಅಭ್ಯರ್ಥಿಗಳು ಭಾಗಿ
ರ್ಯಾಲಿಯಲ್ಲಿ 6043 ಪುರುಷ ಹಾಗೂ 192 ಮಹಿಳಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ 800 ಅಭ್ಯರ್ಥಿಗಳ ದೈಹಿಕ ಸೇರಿದಂತೆ ಇತರೆ ಪರೀಕ್ಷೆ ನಡೆಯಲಿದೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.