ತಪ್ಪು ಕೃಷಿ ನೀತಿಗಳೇ ರೈತರ ಬಡತನಕ್ಕೆ ಕಾರಣ

| Published : Nov 14 2025, 01:45 AM IST

ಸಾರಾಂಶ

ದೇಶದಲ್ಲಿ ಸರಿಯಾದ ಕೃಷಿ ನೀತಿಗಳು ಜಾರಿಗೆ ಬಂದಲ್ಲಿ ಯಾರೂ ಕೂಡ ಬಡ ರೈತರೇ ಇರುವುದಿಲ್ಲ. ನಮ್ಮ ದೇಶದ ಕೃಷಿ ನೀತಿಗಳೇ ನಮ್ಮ ರೈತರನ್ನು ಇಂದಿಗೂ ಬಡವರನ್ನಾಗಿ ಮಾಡಿದೆ ಎಂದು ಪ್ರಗತಿಪರ ಕೃಷಿಕ ಹಾಗೂ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಸಿ. ರಂಗಸ್ವಾಮಿ ಹೇಳಿದರು. ಬಹು ಮುಖ್ಯವಾಗಿ ಯುವತಿಯರಿಗೆ ಕೃಷಿ ಕ್ಷೇತ್ರದಲ್ಲಿ ಅಧಿಕ ಮಟ್ಟದ ಸೌಲಭ್ಯಗಳಿದ್ದು, ಯುವತಿಯರು ಸ್ವಾವಲಂಬಿಗಳಾಗಿ ಬದುಕಲು ಕೃಷಿ ಕ್ಷೇತ್ರ ಅತ್ಯಂತ ಉತ್ತಮವಾಗಿದೆ. ಹೈನುಗಾರಿಕೆಯಿಂದ ಹಿಡಿದು ಪ್ರತಿಯೊಂದು ಕೃಷಿ ಕಾಯಕದಲ್ಲೂ ಸರ್ಕಾರ ಸಬ್ಸಿಡಿ ರೂಪದಲ್ಲಿ ಸೇರಿದಂತೆ ಇನ್ನು ಹಲವು ಸೌಲಭ್ಯಗಳು ಇದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶದಲ್ಲಿ ಸರಿಯಾದ ಕೃಷಿ ನೀತಿಗಳು ಜಾರಿಗೆ ಬಂದಲ್ಲಿ ಯಾರೂ ಕೂಡ ಬಡ ರೈತರೇ ಇರುವುದಿಲ್ಲ. ನಮ್ಮ ದೇಶದ ಕೃಷಿ ನೀತಿಗಳೇ ನಮ್ಮ ರೈತರನ್ನು ಇಂದಿಗೂ ಬಡವರನ್ನಾಗಿ ಮಾಡಿದೆ ಎಂದು ಪ್ರಗತಿಪರ ಕೃಷಿಕ ಹಾಗೂ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಸಿ. ರಂಗಸ್ವಾಮಿ ಹೇಳಿದರು.

ಅರಕಲಗೂಡು ತಾಲೂಕಿನ ದೊಡ್ಡ ಮಗ್ಗೆ ಗ್ರಾಮದ ಮಗ್ಗೆ ಮನೆ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಹಾಸನದ ಎಂ.ಜಿ. ರಸ್ತೆ ಹಾಗೂ ಆರ್. ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ಹೊರ ರಾಷ್ಟ್ರಗಳಲ್ಲಿ ಅತ್ಯುತ್ತಮ ಬೇಡಿಕೆ ಇದ್ದು, ಆಳ್ವಿಕೆ ಮಾಡುವ ಸರ್ಕಾರಗಳು ರೈತರ ಪರವಾದ ಸೂಕ್ತ ನೀತಿಗಳನ್ನು ರೂಪಿಸಿದರೆ ಪ್ರತಿಯೊಬ್ಬ ರೈತನು ಕೃಷಿಯಲ್ಲಿ ಆರ್ಥಿಕವಾಗಿ ಸದೃಢರಾಗಬಹುದು. ಕೃಷಿ ಕ್ಷೇತ್ರ ಇಂದು ಯಾರಿಗೂ ಬೇಡವಾದ ಕ್ಷೇತ್ರವಾಗಿದ್ದು, ಅದರಲ್ಲೂ ಯುವ ಸಮೂಹ ಕೃಷಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಎಷ್ಟೇ ವಿದ್ಯಾವಂತರಾದರೂ ತಮ್ಮ ಪೋಷಕರು ಸಂಪಾದಿಸಿರುವ ಕಡಿಮೆ ಅಥವಾ ಮಧ್ಯಮ ವರ್ಗದ ಜಮೀನಿನಲ್ಲೇ ಇಂದು ಕೃಷಿ ಮಾಡಿದರೆ ಲಾಭ ಮಾಡಬಹುದಾಗಿದೆ. ಅದರಲ್ಲೂ ಬಹು ಮುಖ್ಯವಾಗಿ ಯುವತಿಯರಿಗೆ ಕೃಷಿ ಕ್ಷೇತ್ರದಲ್ಲಿ ಅಧಿಕ ಮಟ್ಟದ ಸೌಲಭ್ಯಗಳಿದ್ದು, ಯುವತಿಯರು ಸ್ವಾವಲಂಬಿಗಳಾಗಿ ಬದುಕಲು ಕೃಷಿ ಕ್ಷೇತ್ರ ಅತ್ಯಂತ ಉತ್ತಮವಾಗಿದೆ. ಹೈನುಗಾರಿಕೆಯಿಂದ ಹಿಡಿದು ಪ್ರತಿಯೊಂದು ಕೃಷಿ ಕಾಯಕದಲ್ಲೂ ಸರ್ಕಾರ ಸಬ್ಸಿಡಿ ರೂಪದಲ್ಲಿ ಸೇರಿದಂತೆ ಇನ್ನು ಹಲವು ಸೌಲಭ್ಯಗಳು ಇದೆ ಎಂದರು. ಕೃಷಿ ಕಾಯಕದಲ್ಲಿ ಮಹಿಳೆಯರ ಪಾತ್ರವೇ ಅತೀ ಮುಖ್ಯವಾಗಿದ್ದು, ಸ್ತ್ರೀಯರು ಕೃಷಿ ಕಾಯಕದ ಜೊತೆ ಕೃಷಿ ಕಾರ್ಯಗಳ ನಿರ್ವಹಣೆಯಲ್ಲಿ ಪಾಲ್ಗೊಂಡರೆ ಯಶಸ್ಸು ಸಾಧ್ಯ. ಕೃಷಿ ಪ್ರಧಾನ ಈ ರಾಷ್ಟ್ರದಲ್ಲಿ ಸ್ತ್ರೀಯರಿಂದಾಗಿಯೇ ಕೃಷಿ ಕಾರ್ಯಗಳು ಇನ್ನು ಜೀವಂತವಾಗಿದೆ ಎಂದರೆ ತಪ್ಪಾಗಲಾರದು. ಪುರುಷರು ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದು ಕಮ್ಮಿ, ಕೇವಲ ನಿರ್ವಹಣೆಯಲ್ಲಿ ಕಾಲ ಕಳೆಯುತ್ತಾರೆ. ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗದೆ ಸಿಕ್ಕಷ್ಟು ಹಣಕ್ಕೆ ಬೆಳೆಯನ್ನು ಮಾರಾಟ ಮಾಡಿ ನಷ್ಟ ಹೊಂದುತ್ತಿದ್ದಾರೆ. ಬೆಳೆಯನ್ನು ಸಂಗ್ರಹಣೆ, ಮಾರುಕಟ್ಟೆಯ ಬಗೆಗಿನ ಜ್ಞಾನ ಸೇರಿದಂತೆ ಈ ತರನಾದ ಜ್ಞಾನದೆಡೆಗೆ ಒತ್ತು ನೀಡಿದರೆ ಬೆಳೆಗಳಿಗೆ ಉತ್ತಮ ಹಣ ಪಡೆದುಕೊಳ್ಳಬಹುದಾಗಿದೆ. ಹಾಗಾಗಿಯೇ ಹೆಣ್ಣು ಮಕ್ಕಳು ಕೃಷಿಯಲ್ಲಿ ನಿರ್ವಹಣೆಯ ಬಗ್ಗೆ ತಿಳಿದುಕೊಂಡರೆ ಹೆಚ್ಚು ಅನುಕೂಲವಾಗಲಿದ್ದು, ಶಿಕ್ಷಣದೊಂದಿಗೆ ಕೃಷಿ ಮಾಡುವ ಮನಸ್ಥಿತಿಯನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು. ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಹಾಗೂ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ಬಿ.ಕೆ. ಮಾತನಾಡಿ, ಯುವತಿಯರು ರೈತರನ್ನು ಮದುವೆಯಾಗಲು ಇಂದು ಹಿಂಜರಿಕೆ ಮಾಡಿಕೊಳ್ಳುತ್ತಾರೆ ಅಂತಹ ಸ್ಥಿತಿಗೆ ಕೃಷಿ ಕ್ಷೇತ್ರ ಬಂದಿದೆ. ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಕಾಣಬಹುದು ಆದರೇ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭದ ಮಾತಲ್ಲ. ನಮ್ಮೊಳಗೆ ಇದ್ದು, ಇಷ್ಟೇಲ್ಲ ಸಾಧನೆ ಮಾಡಿದರು ಏನನ್ನು ಹೇಳಿಕೊಳ್ಳದೆ ಬಹಳ ಸರಳವಾಗಿ ಬದುಕುತ್ತಿರುವ ಡಾ.ಎಂ.ಸಿ. ರಂಗಸ್ವಾಮಿ ಅವರು ಯುವ ಸಮುದಾಯಕ್ಕೆ ದೊಡ್ಡ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ನೈಸರ್ಗಿಕವಾಗಿ ನಿರ್ದಿಷ್ಟವಾದ ಪ್ರದೇಶದಲ್ಲಿ ಬೆಳೆಯುತಿದ್ದ ಬೆಳೆಗಳನ್ನು ಯಾವುದೇ ಭಾಗದಲ್ಲಾದರೂ ಬೆಳೆಯಬಹುದು ಎಂದು ತೊರಿಸಿಕೊಟ್ಟಿದ್ದಾರೆ. ಬೆಂಗಳೂರಿನ ಜಿಕೆವಿಕೆ ಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಗೌರವ ಡಾಕ್ಟರೇಟ್ ಪಡೆಯುವುದು ಅಷ್ಟು ಸುಲಭವಲ್ಲ ಅದರಲ್ಲೂ ಕ್ಷೇತ್ರಕ್ಕೆ ಪಡೆಯುವುದು ಸುಲಭದ ಮಾತಲ್ಲ. ಹೀಗಿರುವಾಗ ರಂಗಸ್ವಾಮಿ ಅವರು ಕೃಷಿ ಕ್ಷೇತ್ರಕ್ಕೆ ಅದೇ ಸಂಸ್ಥೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತ್ತಿದೆ, ಅಂದರೇ ನಾವುಗಳು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಅಂದರೆ ನಾವುಗಳು ಮಾಡುವ ಕೆಲಸದಲ್ಲಿ ಶ್ರದ್ಧೆ, ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದು ಸರಳವಾಗಿ ಬದುಕಿದರೆ ಎಂತಹ ಪ್ರಶಸ್ತಿಗಳು ಆರಿಸಿ ಬರುತ್ತವೆ ಎಂಬುದಕ್ಕೆ ರಂಗಸ್ವಾಮಿ ನಿದರ್ಶನವಾಗಿದ್ದು, ಅವರ ಕೆಲಸಕ್ಕೆ ಪದ್ಮಶ್ರೀ, ವಿಭೂಷಣ ದಂತಹ ಪ್ರಶಸ್ತಿಗಳು ದೊರೆಯಲಿ. ಕೃಷಿಯಲ್ಲಿ ಏನು ಇಲ್ಲ ಎಂಬುವವರು ರಂಗಸ್ವಾಮಿ ಅವರ ಕೃಷಿ ಕಾಯಕವನ್ನು ಒಮ್ಮೆ ಬಂದು ನೋಡಿ ಅವರನ್ನು ಮಾದರಿಯಾಗಿ ತೆಗೆದುಕೊಂಡರೆ ಸಾಕು ಎಂದರು.ಎಂ.ಜಿ. ರಸ್ತೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ. ಕವಿತಾ, ಆರ್.ಸಿ. ರಸ್ತೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ, ಅಧ್ಯಾಪಕರಾದ ಜಿ.ಆರ್. ಮೋಹನ್, ನಂದನ್, ಮನೋಹರ್, ಯೋಗೇಶ್, ಉಪನ್ಯಾಸಕರಾದ ದಿಲೀಪ್ ಕುಮಾರ್, ರವಿ ಕುಮಾರ್, ಕಾವ್ಯ, ರೋಟರಿ ಸಹಾಯಕ ಗೌವರ್ನರ್ ಮಂಜುನಾಥ್, ರೋಟರಿ ರಾಯಲ್‌ನ ಸದಸ್ಯ ಸಚ್ಚಿನ್, ಚೇತನ್ ಇತರರು ಹಾಜರಿದ್ದರು.