ಯಾದಗಿರಿ: ಶೌಚಾಲಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹ

| Published : Jan 04 2024, 01:45 AM IST

ಸಾರಾಂಶ

ಶೌಚಾಲಯದ ಕೊರತೆ ಇದ್ದು ಮಲಮೂತ್ರದ ಜತೆಗೆ ಪ್ರತಿನಿತ್ಯ ಜೀವನ ನಡೆಸಬೇಕಾಗಿದೆ ಎಂದು ಹುಣಸಗಿ ಪಟ್ಟಣದ 1,2 ನೇ ವಾರ್ಡ್‌ ಜನರ ಅಳಲು ಹೇಳತೀರದು.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದ 1ನೇ ಹಾಗೂ 2ನೇ ವಾರ್ಡ್‌ಗೆ ಸಂಬಂಧಿಸಿದ ಮಹಿಳಾ ಸಾರ್ವಜನಿಕರ ಶೌಚಾಲಯಲವು ನಿರ್ವಹಣೆ ಕೊರತೆಯಿಂದ ಶೌಚಾಲಯದ ಕಾಂಪೌಂಡ್‌ ಒಳಗಿಂದ ಮಲಮೂತ್ರ ಸೋರಿಕೆಯಿಂದ ಸುತ್ತಮುತ್ತಲಿನ ಮನೆಗಳಿಗೆ ಮಲಮೂತ್ರದ ನೀರು ನುಗ್ಗುತ್ತಿದೆ. ಇದರ ಮಧ್ಯ ಜೀವನ ಸಾಗಿಸುವಂತಾಗಿದೆ ಎಂದು ತಾಯಮ್ಮ ಅಗ್ನಿ, ಶಾರದ ಅಗ್ನಿ ಹಾಗೂ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಶೌಚಾಲಯವು ರೋಗ ಹರಡುವ ಕೇಂದ್ರವಾಗಿ ಮನೆಯ ಅಂಗಳ ಹಾಗೂ ರಸ್ತೆಗೆ ಶೌಚ ಹರಿಯುತ್ತಿರುವುದರಿಂದ ಶೌಚಾಲಯದ ಸುತ್ತಮುತ್ತಲಿನ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿತ್ತು. ವಾರ್ಡ್‌ನ ನಿವಾಸಿಗಳು ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಗಮನಕ್ಕೆ ತಂದರೂ ಸಮಸ್ಯೆಗೆ ಸ್ಪಂದಿಸದಿರುವುದು ಇಲ್ಲಿನ ನಿವಾಸಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ ಎಂದು ದೂರಿದ್ದಾರೆ.

ಸೆಪ್ಟಿಕ್ ಟ್ಯಾಂಕ್ ಭರ್ತಿಯಾಗಿ ಶೌಚ ರಸ್ತೆ ಹರಿಯುವುದಲ್ಲದೆ ಮನೆಯೊಳಗೆ ಹರಿಯುತಿತ್ತು. ಇದರಿಂದ ನೆಮ್ಮದಿಯಿಂದ ಊಟ ಮಾಡುವುದಕ್ಕೆ ತೊಂದರೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.

ಶೌಚಾಲಯದ ಕೊಠಡಿಗಳಿಗೆ ಬಾಗಿಲು ಇಲ್ಲದೇ ದುರ್ವಾಸನೆ ಹೊರಹೊಮ್ಮುತ್ತಿದ್ದು, ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಭರ್ತಿಯಾಗಿ ದುರ್ವಾಸನೆ ಹಾಗೂ ಶೌಚ ರಸ್ತೆಗೆ ಹರಿಯುತ್ತಿತ್ತು. ಈ ಸಾರ್ವಜನಿಕರ ಮಹಿಳಾ ಶೌಚಾಲಯ ಹಲವು ವರ್ಷಗಳ ಹಿಂದೆ ಬಯಲು ಶೌಚವಾಗಿತ್ತು. ಅಂದಿನ ಗ್ರಾಪಂ ಅಧಿಕಾರಿಗಳು ಶೌಚಾಲಯದ ಸುತ್ತಲೂ ಗೋಡೆ ನಿರ್ಮಿಸಿ ಮಹಿಳೆಯರಿಗೆ ಶೌಚಕ್ಕೆ ಹೋಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಕ್ರಮೇಣವಾಗಿ ಶೌಚಾಲಯದ ಕೊಠಡಿ ನಿರ್ಮಿಸಿ ದಲಿತರ ಕೆರಿಯಲ್ಲಿರುವ ಬಾವಿಗೆ ಪೈಪ್‌ಲೈನ್ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಪಂ ಕಾರ್ಯಾಲಯ ಮೇಲ್ದರ್ಜೆಗೇರಿದ ಪಪಂಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶೌಚಾಲಯದ ಕೊಠಡಿಗಳಿಗೆ ಬಾಗಿಲು ಇಲ್ಲದೇ ದುರ್ವಾಸನೆ ಹೊರಹೊಮ್ಮುತ್ತಿದ್ದು, ಇಲ್ಲಿ ವಾಸಿಸುವ ಜನರು ನರಕಯಾತನೆ ಅನುಭವಿಸುವಂತಾಗಿದೆ. ಗಾಳಿ ಬೀಸಿದ ದಿಕ್ಕಿನೆಡೆಗೆ ಶೌಚಾಲಯದ ದುರ್ಗಂಧ ಪಸರಿಸಲಿರುವುದರಿಂದ ಈ ಶೌಚಾಲಯದ ಸುತ್ತ ನೂರಾರು ಮನೆಯಲ್ಲಿ ವಾಸಿಸುವ ಜನರಿಗೆ ಅಡ್ಡ ಪರಿಣಾಮಗಳು ಬೀರುತ್ತಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಮಹಿಳಾ ಶೌಚಾಲಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸಂಪೂರ್ಣವಾಗಿ ಸ್ವಚ್ಛಗೊಳಿಸುವುದರ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು.

ಲಕ್ಷ್ಮೀಬಾಯಿ ಕಟ್ಟಿಮನಿ, 1ನೇ ವಾರ್ಡ್‌ ನಿವಾಸಿ, ಹುಣಸಗಿ.