ಯಾದಗಿರಿ: ಹಿಟ್ ಆ್ಯಂಡ್ ರನ್ ಕಾನೂನಿಗೆ ಚಾಲಕರ ವಿರೋಧ

| Published : Jan 07 2024, 01:30 AM IST

ಸಾರಾಂಶ

ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅತ್ಯುಗ್ರ ಶಿಕ್ಷೆ ನಿಗದಿಪಡಿಸಿರುವ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ವಿವಿಧ ಚಾಲಕರ ಸಂಘದ ನೇತೃತ್ವದಲ್ಲಿ ಯಾದಗಿರಿಯಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತ ನೀತಿ ಸಂಹಿತೆ ಅಡಿಯಲ್ಲಿ ಚಾಲಕರಿಗೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅತ್ಯುಗ್ರ ಶಿಕ್ಷೆ ನಿಗದಿಪಡಿಸಿರುವ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ವಿವಿಧ ಚಾಲಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಸರ್ಕಾರಿ ಪದವಿ ಕಾಲೇಜು ಹತ್ತಿರದ ಹನುಮಾನ್ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನೇತಾಜಿ ಸುಭಾಶ್ಚಂದ್ರ ವೃತ್ತದವರೆಗೆ ತಲುಪಿ ಮಾನವ ಸರಪಳಿ ನಿರ್ಮಿಸಿ ನೂತನ ಕಾನೂನಿಗೆ ವಿರೋಧ ವ್ಯಕ್ತಪಡಿಸಿದರು.

ಹೊಸ ಕಾನೂನಿನಿಂದ ಚಾಲಕರ ಬದುಕುವ ಹಕ್ಕು ಕಸಿದುಕೊಳ್ಳಲಿದೆ ಯಾರೂ ಬೇಕೆಂದೇ ಅಪಘಾತ ಮಾಡುವುದಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಮುದ್ನಾಳ, ಕೇಂದ್ರ ಗೃಹ ಸಚಿವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸದರೆ, ಅದಕ್ಕೆ ಸಂಬಂಧಿಸಿದ ಚಾಲಕರಿಗೆ ಕನಿಷ್ಠ 10 ವರ್ಷ ಕಾಲ ಶಿಕ್ಷೆ ಮತ್ತು 7 ಲಕ್ಷ ರು. ದಂಡ ವಿಧಿಸುವ ಹೊಸ ಕಾನೂನನ್ನು ಮಂಡಿಸಿದ್ದಾರೆ.

ಆದರೆ, ಯಾವುದೇ ಒಬ್ಬ ಚಾಲಕರು ಸಹ ಉದ್ದೇಶಪೂರ್ವಕವಾಗಿ ಅಪಘಾತ ಸಂಭವಿಸುವಂತೆ ಮಾಡುವುದಿಲ್ಲ. ಆ ಕಾನೂನು ಜಾರಿಗೆ ಬಂದರೆ ವಾಹನ ಚಾಲಕನ ಕುಟುಂಬದವರು ಬೀದಿಗೆ ಬೀಳುತ್ತಾರೆ. ಕಾರಣ ತಾವು ಕಾನೂನು ಜಾರಿಗೊಳಿಸಬಾರದು. ಒಂದು ವೇಳೆ ಜಾರಿಗೊಳಿಸಿದರೆ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಕನಾಟಕ ರಾಜ್ಯ ಚಾಲಕರ ಪರಿಷತ್ (ನೋ) ಅಟೋ ಚಾಲಕರ ಸಂಘದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.

ಚಾಲಕರ ಪರಿಷತ್ ಆಟೋ ಚಾಲಕರ ಜಿಲ್ಲಾಧ್ಯಕ್ಷ ಲಕ್ಷ್ಮಣ ಚವ್ಹಾಣ, ಶಿವಶರಣಪ್ಪ ಕುಂಬಾರ, ಹಣಮಯ್ಯ ಕಲಾಲ, ಸಾಬಯ್ಯ ತಾಂಡೂರಕರ್, ಈಶ್ವರ ನಾಯಕ, ಮರಗಪ್ಪ ನಾಯಕ, ಹಣಮಂತ ನಾಯಕ, ಮಹೇಶ ನಾಟೇಕಾರ, ಆಶಪ್ಪ ನಾಯಕ, ಹಣಮಂತ ಬಬಲಾದಿ, ಈರಪ್ಪ ಚವ್ಹಾಣ, ಮೋನೇಶ ಮಡಿವಾಳ, ಅಂಬೋಜಿ ರಾವ್, ಮಲ್ಲಯ್ಯ ಮುಷ್ಟೂರು ಸೇರಿದಂತೆ ಇತರರಿದ್ದರು.