ಅರಣ್ಯಾಧಿಕಾರಿ ಅಟ್ಟಾಡಿಸಿ ಹೊಡೆದು ಕೊಲೆ?

| Published : Jun 21 2024, 01:07 AM IST

ಅರಣ್ಯಾಧಿಕಾರಿ ಅಟ್ಟಾಡಿಸಿ ಹೊಡೆದು ಕೊಲೆ?
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರದ ರೆಸ್ಟೋರೆಂಟ್‌ವೊಂದರ ಎದುರು ಜೂ.5 ರಂದು ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅರಣ್ಯಾಧಿಕಾರಿ (ಡಿವೈಎಫ್‌ಓ) ಒಬ್ಬರನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಶಹಾಪುರ ನಗರದ ರೆಸ್ಟೋರೆಂಟ್‌ವೊಂದರ ಎದುರು ಜೂ.5 ರಂದು ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅರಣ್ಯಾಧಿಕಾರಿ (ಡಿವೈಎಫ್‌ಓ) ಒಬ್ಬರನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ.

ಮಹೇಶ ಎಸ್‌. ಕನಕಟ್ಟಿ ಕೊಲೆಯಾದ ಉಪ ವಲಯ ಅರಣ್ಯಾಧಿಕಾರಿ. ಇವರು ಮೂಲತಃ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮದವರು. ಶಹಾಪುರ ತಾಲೂಕಿನ ಉಪ ವಲಯದ ಅರಣ್ಯಾಧಿಕಾರಿಗಳಾಗಿ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದರು.

ಅನಾಮಧೇಯ ಶವವೊಂದು ಹೋಟೆಲ್‌ ಎದುರಿನ ರಸ್ತೆ ಬದಿ ಬಿದ್ದಿದೆ ಎಂಬ ಮಾಹಿತಿಯಿಂದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರು, ಅನುಮಾನಾಸ್ಪದ ಸಾವು (174 (ಸಿ)) ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದರು. ಗುರುತಿನ ಚೀಟಿ ಆಧಾರದ ಮೇಲೆ ಇದು ಡಿವೈಎಫ್‌ ಮಹೇಶರದ್ದು ಎಂದು ಗೊತ್ತಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದಾಗ, ನಾಲ್ಕೈದು ಜನರ ತಂಡ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಕಂಡು ಬಂದಿದೆ. ಇದು ಸಹಜ ಸಾವಲ್ಲ, ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರಿಂದ ಜೂ.17 ರಂದು ಶಹಾಪುರ ನಗರ ಠಾಣೆಯಲ್ಲಿ ಐಪಿಸಿ 302 ರಡಿ ದೂರು (0113/2024) ದಾಖಲಾಗಿತ್ತು. ಬುಧವಾರ (ಜೂ.19) ಐವರನ್ನು ಬಂಧಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಕೊಲೆ ಬಯಲು: ಜೂನ್‌ 5 ರಂದು ರಾತ್ರಿ 8 ರಿಂದ 9-15 ರ ಸುಮಾರಿಗೆ ಶಹಾಪುರ ನಗರದ ಮೋಟಗಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್ ಎದುರು ಈ ಘಟನೆ ನಡೆದಿದ್ದು, ನಾಲ್ಕೈದು ಜನರ ತಂಡವೊಂದು ತಮ್ಮ ಪತಿ ಡಿವೈಎಫ್ಓ ಮಹೇಶರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇದು ಕಂಡುಬಂದಿದೆ ಎಂದು ಮೃತಪಟ್ಟ ಮಹೇಶ ಅವರ ಪತ್ನಿ ನಾಗವೇಣಿ ತಾವು ನೀಡಿರುವ ದೂರಿನಲ್ಲಿ

ತಿಳಿಸಿದ್ದಾರೆ.

ಬಾರ್‌ನಲ್ಲಿ ಮಾತಿನ ಚಕಮಕಿ ಕೊಲೆಗೆ ಕಾರಣ?

ಉಪ ವಲಯ ಅರಣ್ಯಾಧಿಕಾರಿ ಮಹೇಶ ಕನಕಟ್ಟಿ ಕೊಲೆಗೆ ಬಾರ್‌ನಲ್ಲಿ ನಡೆದ ಮಾತಿನ ಚಕಮಕಿ ಕಾರಣ ಎನ್ನಲಾಗುತ್ತಿದೆ. ಜೂ.5 ರಂದು ಸಂಜೆ ಡಿವೈಎಫ್‌ಓ ಮಹೇಶ ಅವರು ಊಟಕ್ಕೆ ಹೋಗಿದ್ದ ವೇಳೆ, ಅಲ್ಲಿಯೇ ಕುಳಿತಿದ್ದ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತೆರಳಿದಾಗ, ಮಹೇಶ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿದ್ದ ಅವರು ಅಲ್ಲಿಯೇ ಹೊರಬರುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಡಿವೈಎಫ್‌ಓ ಮಹೇಶ ಕನಕಟ್ಟಿ (49) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಶಹಾಪುರ ತಾಲೂಕಿನ ನಡಿಹಾಳ ತಾಂಡಾದ ರಾಜು ಚವ್ಹಾಣ್‌, ರೇಖು ಚಾಮನಾಳ್, ನರಸಿಂಗ ರಾಠೋಡ್, ತಾರಾಸಿಂಗ ಚವ್ಹಾಣ್, ಪ್ರಕಾಶ ಹೋತಪೇಟ ಬಂಧಿತರಾಗಿದ್ದಾರೆ. ಜಗಳ ಏಕೆ ಶುರುವಾಯಿತು, ಜಗಳ ಕೊಲೆಯಷ್ಟು ವಿಕೋಪಕ್ಕೆ ಹೋಗಲು ಕಾರಣ ಏನು ಎಂಬಿತ್ಯಾದಿ ಅಂಶಗಳು ಇನ್ನಷ್ಟೇ ತನಿಖೆಯಿಂದ ಹೊರಬರಬೇಕಿದೆ.

ಆರೋಪಿಗಳ ರಕ್ಷಣೆಗೆ ಯತ್ನ,

ಸಿಸಿಟಿವಿ ತಿರುಚಿರುವ ಆರೋಪ

ಯಾದಗಿರಿ:

ತಮ್ಮ ತಂದೆ ಒಬ್ಬ ಸರ್ಕಾರಿ ನೌಕರರಾಗಿದ್ದರು. ಅವರದ್ದು ಕೊಲೆ ಎಂದು ಕಂಡುಬಂದಿದ್ದರೂ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಆರಂಭದಲ್ಲಿ ಪೊಲೀಸರು ಹಿಂದೇಟು ಹಾಕಿದ್ದರು, 15 ದಿನಗಳ ಕಾಲ ಠಾಣೆಗೆ ಅಲೆದಾಡಿದ್ದೇವೆ. ಅಧಿಕಾರಿಗಳು ಪ್ರಕರಣದ ದಾರಿ ತಪ್ಪಿಸಲೆತ್ನಿಸಿದ ಬಗ್ಗೆಯೂ ತನಿಖೆ ನಡೆಯಲಿ ಎಂದು ಮೃತ ಡಿವೈಎಫ್‌ಓ ಮಹೇಶ ಕನಕಟ್ಟಿ ಪುತ್ರ ಸುಂದರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಡಿವೈಎಫ್‌ಓ ಮಹೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

- ಜಿ.ಸಂಗೀತಾ, ಎಸ್ಪಿ, ಯಾದಗಿರಿ. ಸಿಸಿಟಿವಿ ತಿರುಚಿರಬಹುದಾದ ಸಾಧ್ಯತೆಗಳಿವೆ. ದೂರು ಕೊಟ್ಟರೆ ಕುಟುಂಬಸ್ಥರಿಗೆ ಅನುಕಂಪದ ನೌಕರಿ ಸಿಗಲಿಲ್ಲಕ್ಕಿಲ್ಲ ಎಂದು ನಮ್ಮನ್ನು ದಿಕ್ಕು ತಪ್ಪಿಸುವ ಯತ್ನವೂ ನಡೆದಿತ್ತು.

ಸುಂದರ್‌, ಮೃತ ಡಿವೈಎಫ್‌ಓ ಮಹೇಶ ಪುತ್ರ.