ಸಾರಾಂಶ
21 ವರ್ಷಗಳ ನಂತರ ಸಮೀಪದ ಯಾದವಾಡ ಗ್ರಾಮದಲ್ಲಿ ಮೇ 1 ರಿಂದ 9ರ ವರೆಗೆ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, 9 ದಿನಗಳ ಕಾಲ ನಿತ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಧಾರವಾಡ: ಬರೋಬ್ಬರಿ 21 ವರ್ಷಗಳ ನಂತರ ಸಮೀಪದ ಯಾದವಾಡ ಗ್ರಾಮದಲ್ಲಿ ಮೇ 1 ರಿಂದ 9ರ ವರೆಗೆ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, 9 ದಿನಗಳ ಕಾಲ ನಿತ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ 1ರಂದು ಬೆಳಗ್ಗೆ 8ಕ್ಕೆ ನಯಾನಗರದ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಕುಂಭಮೇಳ, ಆರತಿ, ಡೊಳ್ಳು, ಭಜನೆ ವಾದ್ಯದಿಂದ ಮೆರವಣಿಗೆ ಮೂಲಕ ಗ್ರಾಮದೇವಿಯರಾದ ದುರ್ಗಮ್ಮ, ದ್ಯಾಮಮ್ಮ ಅವರ ಪುರ ಪ್ರವೇಶ ಆಗಲಿದೆ. ಮೇ 2 ರಂದು ಬ್ರಾಹ್ಮೀ ಮುಹೂರ್ತದಲ್ಲಿ ರಾಚೂಟೇಶ್ವರ ಸ್ವಾಮೀಜಿ ಹಾಗೂ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ದೇವಿಯರಿಗೆ ಅಭಿಷೇಕ, ಕುಂಕುಮಾರ್ಚನೆ, ಹೋಮ-ಹವನ, ದೃಷ್ಟಿ ಬರೆಯುವ ಕಾರ್ಯಕ್ರಮ, ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯ ಧಾರಣೆ ಹಾಗೂ ಉಡಿ ತುಂಬುವ ಕಾರ್ಯಕ್ರಮವಿದೆ.ಮೂರು ದಿನ ಹೊನ್ನಾಟ: ಮೇ 3ರಂದು ರೋಣದ ಶ್ರವಣಕುಮಾರ ಸ್ವಾಮೀಜಿ ಹಾಗೂ ನಯಾನಗರ ಸ್ವಾಮೀಜಿ ಸಾನಿಧ್ಯದಲ್ಲಿ ಅಭಿಷೇಕ, ಕುಂಕುಮಾರ್ಚನೆ, ಹೋಮಹವನ ಹಾಗೂ ಹೊನ್ನಾಟ, ಮೇ 4 ಮತ್ತು 5ರಂದು ಚಂಡಿಕಾಹೋಮ ಹಾಗೂ ಹೊನ್ನಾಟ ನಡೆಯಲಿದೆ. ಮೇ 6 ರಂದು ಚಂಡಿಕಾಹೋಮ ಹಾಗೂ ಪಾದಗಟ್ಟಿ ಸ್ಥಾಪನೆ, ಮೇ 7ರಂದು ಚಂಡಿಕಾಹೋಮ ಮತ್ತು ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮವಿದೆ. ಮೇ 8ರಂದು ಚಂಡಿಕಾಹೋಮ ಹಾಗೂ ರಾತ್ರಿ ದೇವಿಯರು ಸೀಮೆಗೆ ಹೊರಡಲಿದ್ದಾರೆ. ಮೇ 9 ಬೆಳಗ್ಗೆ ಚಂಡಿಕಾಹೋಮ, ನವಕನ್ನಿಕೆಯರ ಪೂಜೆ, ಪೂರ್ಣಾಹುತಿ ಅಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಿತ್ಯ ರಾತ್ರಿ 8 ರಿಂದ ಅಮ್ಮಿನಬಾವಿ, ಉಪ್ಪಿನಬೆಟಗೇರಿ ಸೇರಿದಂತೆ ವಿವಿಧ ಮಠಾಧೀಶರಿಂದ ಆಶೀರ್ವಚನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: 9 ದಿನಗಳ ಕಾಲ ರಾತ್ರಿ 10ರ ನಂತರ ಗ್ರಾಮದಲ್ಲಿ ಸ್ಥಾಪಿಸಿರುವ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ರಸಮಂಜರಿ ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ ಹಾಸ್ಯ, ಜಾನಪದ, ಪ್ರಭಾವತಿ ಕಿರಣಗಿ ಹಾಗೂ ಶೋಭಾ ಮಹಾಲ್ ಐನಾಪೂರ ಭಜನೆ, ಸವಾಲ್ ಭಜನೆ, ಹಾವೇರಿಯ ಖಾಸಿಂ ಹಾಗೂ ತಂಡದಿಂದ ಸಂಗೀತ, ರಾಜಣ್ಣ ಜೇವರ್ಗಿ ನಿರ್ದೇಶನದ ಕುಂಟ ಕೋಣ ಮೂಕ ಜಾಣ ನಾಟಕ ಪ್ರದರ್ಶನ, ಡೊಳ್ಳಿನ ಪದಗಳು, ಜೋಗತಿ ನೃತ್ಯ, ಹಾಸ್ಯ ಹಾಗೂ ಯಾದವಾಡ ಗ್ರಾಮದ ಮಕ್ಕಳಿಂದ ನೃತ್ಯ, ಸಂಗೀತ, ಏಕಪಾತ್ರಾಭಿನಯ, ಮಿಮಿಕ್ರಿ, ಕಿರುನಾಟಕವೂ ಇರಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಒಂಭತ್ತು ದಿನಗಳ ಕಾಲ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ಜಾತ್ರಾ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.