A coalition of various organizations-called for a complete shutdown- of Yadgir district on November 6th- demanding that water be released from the Narayanpur Reservoir

ಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ರೈತರ ಹೊಲಗಳಿಗೆ ನ.12ರಿಂದ ನ.30ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ, ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಸಾಮೂಹಿಕ ನೇತೃತ್ವದಲ್ಲಿ ನ.6 ಯಾದಗಿರಿ ಜಿಲ್ಲೆ ಸಂಪೂರ್ಣ ಬಂದ್‌ಗೆ ಸರ್ವ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬಂದ್ ಕುರಿತಂತೆ ವಿವಿಧ ಸಂಘಟನೆಗಳು ಈಗಾಗಲೇ ಪೂರ್ವಭಾವಿ ಸಭೆ ನಡೆಸಿದ್ದಾರೆ. ಜಿಲ್ಲೆಯ ರೈತರ ಹಿತ ಕಾಪಾಡುವ ಹಿನ್ನೆಲೆಯಲ್ಲಿ ಬಂದ್‌ಗೆ ನಿರ್ಧರಿಸಲಾಗಿದ್ದು, ಇದು ಪಕ್ಷಾತೀತ ಹೋರಾಟ ಅನ್ನೋದು ಮುಖಂಡರ ಮಾತು.ನ.6ರಂದು ಯಾದಗಿರಿ ಜಿಲ್ಲೆ ಬಂದ್ ಮಾಡಿ ಬೇಡಿಕೆಗೆ ಆಗ್ರಹಿಸಲಾಗುತ್ತಿದೆ.

ಜಿಲ್ಲೆಯ ಆರು ತಾಲೂಕುಗಳ ಕೇಂದ್ರ ಸ್ಥಾನಗಳಲ್ಲಿ ಬಂದ್ ಹೋರಾಟ ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ದೊಡ್ಡಮಟ್ಟದಲ್ಲಿ ಬಂದ್ ಕರೆ ನೀಡಲಾಗಿದೆ. ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಎಲ್ಲಡೆ ಪ್ರತಿಭಟನೆ ನಡೆಸಲಾಗುವುದು. ನಗರದಲ್ಲಿ ಬೆಳಗ್ಗೆ 10ಕ್ಕೆ ಗಾಂಧಿ ಸರ್ಕಲ್‌ನಲ್ಲಿ ಸಾವಿರಾರು ಜನರು ಸೇರಿ ಅಲ್ಲಿಂದ ಸುಭಾಶ್ಚಂದ್ರ ಭೋಸ್‌ ವೃತ್ತದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಬಂದ್ ಮಾಡಿದರೆ ಸಾರ್ವಜನಿಕರಿಗೂ ಮತ್ತು ವ್ಯಾಪಾಸ್ಥರಿಗೂ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಅಂದು ಬೆಳಗ್ಗೆಯಿಂದ ಬಂದ್ ಮಾಡಿ ಮಧ್ಯಾಹ್ನ ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ಸಮಾವೇಶಗೊಂಡು, ಬಹಿರಂಗ ಸಭೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಬೇಡಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ನೀರು ಹರಿಸಿ: ಶಾಸಕ ದರ್ಶನಾಪುರ, ಆರ್‌ವಿಎನ್‌ ಮನವಿ:

ಸುರಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ಸಮರ್ಪಕ ನೀರು ಒದಗಿಸುವ ಉದ್ದೇಶದಿಂದ ನ.30 ರವರೆಗೆ ನಾರಾಯಣಪುರ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಶಹಾಪುರ ಶಾಸಕ, ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು,

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಕೃಷಿಚಟುವಟಿಕೆಯಲ್ಲಿ ತೊಡಗಿದ್ದು, ಬೆಳೆಗಳು ಬೆಳವಣಿಗೆಯ ನಿರ್ಣಾಯ ಹಂತದಲ್ಲಿವೆ. ಈ ಸಂದರ್ಭದಲ್ಲಿ ಬೆಳೆಗಳ ಉತ್ತಮ ಬೆಳವಣಿಗೆ ಹಾಗೂ ಇಳುವರಿ ದೃಷ್ಟಿಯಿಂದ ಸಮರ್ಪಕ ನೀರಿನ ಪೂರೈಕೆ ಅತ್ಯಗತ್ಯವಾಗಿದೆ. ಆದ್ದರಿಂದ ನ.30ರವರೆಗೆ ಕಾಲುವೆಗಳಿಗೆ ಸತತವಾಗಿ ನೀರು ಹರಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಸುತ್ತ ನೀರಿನ ಅಭಾವದಿಂದ ಬೆಳೆಗಳು ಒಣಗುವ ಭೀತಿ ಇದ್ದು, ರೈತರು ಅಪಾರ ನಷ್ಟ ಅನುಭವಿಸುವ ಆತಂಕವಿದೆ. ಹೀಗಾಗಿ ತಕ್ಷಣವೇ ವಾರಾಬಂದಿ ರದ್ದುಗೊಳಿಸಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಜಲಾಶಯದ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ರೈತರ ಹಿತದೃಷ್ಟಿಯಿಂದ ಹಾಗೂ ಬೆಳೆಗಳ ರಕ್ಷಣೆಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಸಚಿವ ಡಾ.ಅಜಯ ಸಿಂಗ್, ರವಿ ಬೋಸರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.