District Health and Family Welfare Officer Dr. Mahesh Biradar stated that Albendazole tablets are being distributed free of cost to children aged 1 to 19 across Yadgir district as part of the National Deworming Day observed nationwide on August 10 and the 'mop-up day' program continuing until August 17.Open in Google Trans

ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿ ಮಾತ್ರೆ: ಡಾ.ಮಹೇಶ । 1ರಿಂದ 19 ವರ್ಷದೊಳಗಿನವರಿಗೆ ವಿತರಣೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ದೇಶಾದ್ಯಂತ ಆ.10 ರಂದು ಹಮ್ಮಿಕೊಂಡ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಹಾಗೂ ಆ.17ರ ತನಕ ನಡೆಯಲಿರುವ ಮಾಪ್ ಅಪ್ ಡೇ ಕಾರ್ಯಕ್ರಮದ ಅಂಗವಾಗಿ, ಯಾದಗಿರಿ ಜಿಲ್ಲೆಯಾದ್ಯಂತ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಲ್‍ಬೆಂಡಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರ್.ಸಿ.ಎಚ್ ವಿಭಾಗದ ಸಹಯೋಗದಲ್ಲಿ ಯಾದಗಿರಿಯ ಡಾ.ಅಂಬೇಡ್ಕರ್ ಚೌಕ್‍ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಾರ್ವಜನಿಕರು ಹಾಗೂ ಪೋಷಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ತಮ್ಮ ಮಕ್ಕಳಿಗೆ ತಪ್ಪದೇ ಮಾತ್ರೆ ಕೊಡಿಸಬೇಕು.1 ರಿಂದ 5 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. 6 ರಿಂದ 19 ವರ್ಷದ ಮಕ್ಕಳಿಗೆ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆ ವಿತರಿಸಲಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಿ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಹಣಮಂತ ರೆಡ್ಡಿ ಮಾತನಾಡಿ, ಮಕ್ಕಳು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಕೈಗಳನ್ನು ಹಲವು ಬಾರಿ ತೊಳೆದುಕೊಳ್ಳುವುದರ ಜತೆಗೆ ವಾರಕ್ಕೊಮ್ಮೆ ಉಗುರುಗಳನ್ನು ಕತ್ತರಿಸಿಕೊಳ್ಳಬೇಕು. ವರ್ಷಕ್ಕೆ ಎರಡು ಬಾರಿ ನೀಡಲಾಗುವ ಅಲ್ಬೆಂಡಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕು ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.

ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಗನ್ನಾಥ, ಡಾ.ವಿನುತಾ, ಡಾ.ಕ್ಷಿತಿಜ, ಮಲ್ಲೇಶಪ್ಪ, ಶಂಕರಾನಂದ, ಇತರ ಅಧಿಕಾರಿಗಳು, ಶಿಕ್ಷಕರು ಸಹಿತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಂಜುಳಾ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು. ರಾಣೋಜಾ ವಂದಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಕಾರ್ಯಕ್ರಮ ನಿರೂಪಿಸಿದರು.

------ಬಾಕ್ಸ್-----

5 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಮಾತ್ರೆ

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5,13,173 ಮಕ್ಕಳಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಇದರಲ್ಲಿ 1,51,542 ಅಂಗನವಾಡಿ ಮಕ್ಕಳು, 7,577 ಶಾಲೆಯಿಂದ ಹೊರಗುಳಿದ ಮಕ್ಕಳು, 3,61,631 ಶಾಲಾ ಮಕ್ಕಳು, 18,678 ಪಿಯು ವಿದ್ಯಾರ್ಥಿಗಳು ಹಾಗೂ 1,956 ಐಟಿಐ/ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಮಾಹಿತಿ ನೀಡಿದರು.

-----ಫೋಟೊ-----

11ವೈಡಿಆರ್‌3

ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರ್.ಸಿ.ಎಚ್ ವಿಭಾಗದ ಸಹಯೋಗದಲ್ಲಿ, ಯಾದಗಿರಿಯ ಡಾ.ಅಂಬೇಡ್ಕರ್ ಚೌಕ್‍ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಆಯೋಜಿಸಿತ್ತು.