ಶಹಾಪುರ : ಕೊಲೆಯಾದ ತಂದೆಯನ್ನು ರಕ್ಷಿಸದಕ್ಕೆ ಸಹಚರನನ್ನು ಕೊಂದ ಮಕ್ಕಳು - ಶಂಕೆ

| N/A | Published : Mar 17 2025, 09:34 AM IST

man found dead

ಸಾರಾಂಶ

ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಾದ್ಯಾಪುರದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಕೊಲೆಯಾದ ಸ್ನೇಹಿತನನ್ನು ಆತನ ಮಕ್ಕಳು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

 ಯಾದಗಿರಿ/ಶಹಾಪುರ : ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಾದ್ಯಾಪುರದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಕೊಲೆಯಾದ ಸ್ನೇಹಿತನನ್ನು ಆತನ ಮಕ್ಕಳು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದ ಮಾಪಣ್ಣ ಬಡಿಗೇರ್‌ (52) ಹಾಗೂ ಸ್ನೇಹಿತ ಅಲೀಸಾಬ್‌ (55) ಮೃತರು.

ಭಾನುವಾರ ಮಾಪಣ್ಣನ ಮೇಲೆ ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದಾಗ, ಜೊತೆಗಿದ್ದ ಅಲೀಸಾಬ್‌ ಪ್ರಾಣಭೀತಿಯಿಂದ ಓಡಿ ಬಂದು ಮನೆ ಸೇರಿದ್ದ. ಹಂತಕರಿಗೆ ಈತನೇ (ಅಲೀಸಾಬ್‌) ಸುಳಿವು ನೀಡಿದ್ದಾನೆಂಬ ಶಂಕೆಯ ಮೇರೆಗೆ ಮಾಪಣ್ಣನ ಸಂಬಂಧಿಕರೇ ಅಲೀಸಾಬ್‌ನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಎರಡೂ ಪ್ರಕರಣಗಳಲ್ಲಿನ ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಎಸ್ಪಿ ಪ್ರಥ್ವಿಕ್‌ ಶಂಕರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಪಣ್ಣ ಬಡಿಗೇರ್ ಈ ಭಾಗದ ದಲಿತ ಸಮುದಾಯದ ಪ್ರಮುಖ ಮುಖಂಡನೆಂದು ಗುರುತಿಸಿಕೊಂಡಿದ್ದರು. ಈತನ ವಿರುದ್ಧ ಕಲಬುರಗಿ, ಜೇವರ್ಗಿ, ಶಹಾಪುರ, ಗೋಗಿ ಸೇರಿದಂತೆ ಹಲವೆಡೆ ವಿವಿಧ ರೀತಿಯ 9ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ, ಈತನನ್ನು ರೌಡಿ ಶೀಟರ್‌ ಪಟ್ಟಿಗೆ ಸೇರಿಸಲಾಗಿತ್ತು ಎನ್ನಲಾಗಿದೆ.

10 ವರ್ಷ ಹಿಂದೆ ಫೇಲಾಗಿತ್ತು

ಕೊಲೆ ಮಾಡುವ ಯತ್ನ!

ಶಹಾಪುರದ ಹಳೇ ಬಸ್‌ ನಿಲ್ದಾಣದ ಬಳಿ ಮಾಪಣ್ಣನ ಹತ್ಯೆಗೆ 10 ವರ್ಷಗಳ ಹಿಂದೆಯೇ ಪ್ರಯತ್ನ ನಡೆಸಿದ್ದ ದುಷ್ಕರ್ಮಿಗಳೇ ಈ ಭಾರೀ ಸಂಚು ರೂಪಿಸಿ ಕೊಚ್ಚಿ ಹಾಕಿದ್ದು, ರೌಡಿಶೀಟರ್‌ ಹುಸೇನಿ ಈ ಹತ್ಯೆ ರೂವಾರಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಓಕುಳಿಯಾಟದ ಮರುದಿನವೇ ಮಾಪಣ್ಣ ಹಾಗೂ ಅಲೀಸಾಬ್‌ ಜೋಡಿ ಕೊಲೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

ಕ್ಷೌರ ಮಾಡಿಸಿಕೊಂಡು

ಬರುತ್ತಿದ್ದಾಗ ಕೊಚ್ಚಿ ಕೊಲೆ

ಭಾನುವಾರ, ಶಹಾಪುರದಲ್ಲಿ ಕ್ಷೌರ ಮಾಡಿಸಿಕೊಂಡ ನಂತರ ಅಲೀಸಾಬ್‌ ಚಲಾಯಿಸುತ್ತಿದ್ದ ಬೈಕಿನಲ್ಲಿಯೇ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ಮಾಪಣ್ಣನನ್ನು ಸಾದ್ಯಾಪುರ ಸಮೀಪ ಅಡ್ಡಗಟ್ಟಿದ ದುಷ್ಕರ್ಮಿಗಳು, ಕಣ್ಣಿಗೆ ಖಾರದಪುಡಿ ಎರಚಿ, ಮಾರಕಾಸ್ತ್ರಗಳಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಇನ್ನು, ಸುಮಾರು 15-20 ವರ್ಷಗಳಿಂದ ಮಾಪಣ್ಣನ ಜೊತೆಯಲ್ಲೇ ಇದ್ದ ಅಲೀಸಾಬ್‌, ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಮದ್ದರಕಿ ಗ್ರಾಮದ ಮನೆಗೆ ಬಂದು ಸೇರಿದ್ದ. ಆದರೆ, ಕೊಲೆಗಾರರಿಗೆ ಈತನೇ (ಅಲೀಸಾಬ್‌) ಸುಳಿವು ನೀಡಿದ್ದಾನೆ ಎಂಬ ಶಂಕೆಯಿಂದ ಆಕ್ರೋಶಗೊಂಡು ಮಾಪಣ್ಣನ ಸಂಬಂಧಿಕರು ಅಲೀಸಾಬ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂಬ ಆರೋಪಗಳಿವೆ.

ಪೊಲೀಸ್ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಆದಷ್ಟು ಬೇಗ ಅಪರಾಧಿಗಳನ್ನು ಬಂಧಿಸಲಾಗುವುದು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

- ಪೃಥ್ವಿಕ್‌ ಶಂಕರ್, ಎಸ್ಪಿ, ಯಾದಗಿರಿ