ಬರಪೀಡಿತ ಪ್ರದೇಶಗಳ ಪಟ್ಟಿ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದ್ದು, ಸೆ.16 ರೊಳಗೆ ಬರ ಪಟ್ಟಿಗೆ ಸಂಪೂರ್ಣ ಯಾದಗಿರಿ ಜಿಲ್ಲೆಯನ್ನು ಸೇರ್ಪಡೆ ಮಾಡದಿದ್ದರೆ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ (ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ)ದ ಅಂಗವಾಗಿ ಧ್ವಜಾರೋಹಣಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಗೂ ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಲು ಯಾದಗಿರಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬರಪೀಡಿತ ಪ್ರದೇಶಗಳ ಪಟ್ಟಿ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದ್ದು, ಸೆ.16 ರೊಳಗೆ ಬರ ಪಟ್ಟಿಗೆ ಸಂಪೂರ್ಣ ಯಾದಗಿರಿ ಜಿಲ್ಲೆಯನ್ನು ಸೇರ್ಪಡೆ ಮಾಡದಿದ್ದರೆ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ (ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ)ದ ಅಂಗವಾಗಿ ಧ್ವಜಾರೋಹಣಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಗೂ ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಲು ಯಾದಗಿರಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ತೀರ್ಮಾನಿಸಿದೆ.

ಸೆ.7 ರಂದು ಯಾದಗಿರಿ ಬಂದ್‌ಗೆ ಕರೆ ನೀಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಹಾಗೂ ಸೆ.11 ರಂದು ನಡೆದ ಕೆಡಿಪಿ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲರ ಜೊತೆ ವಾಕ್ಸಮರ ನಡೆಸಿದ್ದ ಸರ್ವ ಸಂಘಟನೆಗಳ ಹೋರಾಟ ಸಮಿತಿಯು, ಭಾನುವಾರ ಯಾದಗಿರಿಯಲ್ಲಿ ಸಭೆ ನಡೆಸಿ, ಇಂತಹ ಪ್ರತಿಭಟನೆಗಳ ಎಚ್ಚರಿಕೆ ನೀಡಿದೆ.

ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸೆ. 16 ರಂದು ಬರಪೀಡಿತ ಪ್ರದೇಶಗಳ 3ನೇ ಪಟ್ಟಿ ಬಿಡುಗಡೆಯಾಗಲಿದ್ದು, ಅದರಲ್ಲಿ ಯಾದಗಿರಿ ಸೇರ್ಪಡೆಯಾಗಲಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಭರವಸೆ ನೀಡಿದ್ದಾರೆ. ಈ ಭರವಸೆ ಹುಸಿಯಾದರೆ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸುವ ಸಚಿವರ ವಿರುದ್ಧ ಪ್ರತಿಭಟನೆಯ ಕಾವು ಮುಟ್ಟಿಸಲಾಗುವುದು ಎಂದು ಮುಖಂಡರು ತೀರ್ಮಾನಿಸಿದ್ದಾರೆ.

ಸೆ.11 ರಂದು ನಡೆದ ಕೆಡಿಪಿ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬರದ ಪರಿಸ್ಥಿತಿ ಬಗ್ಗೆ ಮಾಹಿತಿ ಸಿಕ್ಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಾನದಂಡಗಳ ಆಧಾರದಡಿ ಯಾದಗಿರಿ ಜಿಲ್ಲೆ ಬರ ಪೀಡಿತ ಪಟ್ಟಿಗೆ ಸೇರಬೇಕು. ಆದರೆ, ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ವಿನಾಕಾರಣ ಮೀನಮೇಷ ಎಣಿಸುತ್ತ, ರೈತರನ್ನು ವಂಚಿಸಲು ಹೊರಟಿರುವ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಮುಖಂಡರು ಗುಡುಗಿದರು.

ಬರ ಪಟ್ಟಿ ಬಿಡುಗಡೆ ಮಾಡುವುದು ಸರ್ಕಾರಕ್ಕೆ ಚೆಲ್ಲಾಟವಾಗಿದ್ದರೆ, ಜಿಲ್ಲೆಯಲ್ಲಿ ಬಡ ರೈತರು ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಸಾಲಸೋಲ ಮಾಡಿಕೊಂಡು ಬೆಂಗಳೂರು, ಮುಂಬಯಿ ಮುಂತಾದ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಒಂದು ವೇಳೆ ಸರ್ಕಾರ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಬರ ಪಟ್ಟಿಗೆ ಸೇರ್ಪಡೆ ಮಾಡದೇ ಇದ್ದಲ್ಲಿ ಸೆ. 17 ರಂದು ಘೇರಾವ್ ಅಷ್ಟೇ ಅಲ್ಲ, ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ಸರ್ಕಾರಕ್ಕೆ ಸೆಡ್ಡು ಹೊಡೆಯಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮರೆಪ್ಪ ನಾಯಕ ಮೊಗದಂಪುರ, ಉಮೇಶ ಮುದ್ನಾಳ, ಭೀಮಾಶಂಕರ ಆಲ್ದಾಳ, ಭೀಮರಾಯ ಬಂಕಲಿಗಿ, ಮೈಲಾರಪ್ಪ ಎಂ. ಜಾಗೀರದಾರ, ದೇವಿಂದ್ರಪ್ಪ ಯರಗೋಳ, ವಿಜಯ ಭರತ, ರಾಜಶೇಖರ ಎದುರುಮನಿ, ಅಜಯ ಮಾಸನ್‌, ವಿಶ್ವಾರಾಧ್ಯ ದಿಮ್ಮೆ, ಅನಿಲ್ ಕರಾಟೆ, ಶಿವರಾಜ ದಾಸನಕೇರಿ, ಮಹಾವೀರ ಲಿಂಗೇರಿ, ಭೀಮು ಪೂಜಾರಿ, ಬೀರೇಶ ಚಿರತೆನೋರ್, ರುದ್ರಾಂಬಿಕಾ ಪಾಟೀಲ್, ಮಲ್ಲಮ್ಮ ನಾಟೇಕರ್, ಫಾತಿಮಾ ಬೇಗಂ, ಖಾಸಿಮ್ ಬಿ. ಚಂದ್ರಕಲಾ ಗುತ್ತೇದಾರ, ರವಿ ಕೆ. ಮುದ್ನಾಳ, ಕಾಶಪ್ಪ ನಾಯಕ, ವೀರೇಶ ಸಜ್ಜನ್, ಭಾಸ್ಕರ್ ಇನ್ನಿತರರು ಉಪಸ್ಥಿತರಿದ್ದರು.