ಏಪ್ರಿಲ್ 19ರಂದು ಮಡಿಕೇರಿಯಲ್ಲಿ ಯದುವೀರ್ ರೋಡ್ ಶೋ

| Published : Apr 17 2024, 01:21 AM IST

ಏಪ್ರಿಲ್ 19ರಂದು ಮಡಿಕೇರಿಯಲ್ಲಿ ಯದುವೀರ್ ರೋಡ್ ಶೋ
Share this Article
  • FB
  • TW
  • Linkdin
  • Email

ಸಾರಾಂಶ

19ರಂದು ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಮಡಿಕೇರಿಯ ಮಹದೇವಪೇಟೆಯಿಂದ ರೋಡ್ ಶೋ ಮಾಡಲಿದ್ದಾರೆ. ಅಲ್ಲದೆ ಬುಧವಾರ ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಯದುವೀರ್ ಸಂಸದರಾಗಬೇಕು ಅವರು ಹಾಗೂ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೇಶದ ಭದ್ರತೆ ಮತ್ತು ಅಭಿವೃದ್ಧಿಯ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮತ ಯಾಚಿಸುತ್ತಿದ್ದರೆ, ಕಾಂಗ್ರೆಸ್ ನವರು ಜಾತಿಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೇಶದ ಭದ್ರತೆ ಮತ್ತು ಭವಿಷ್ಯದ ಚುನಾವಣೆಯಾಗಿದ್ದು, ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಗುರಿಯನ್ನು ಮತದಾರರು ಹೊಂದಿದ್ದಾರೆ. ಆದರೆ ಕೊಡಗಿನಲ್ಲಿ ಅರೆಭಾಷೆ ಮತ್ತು ಒಕ್ಕಲಿಗ ಸಮುದಾಯದ ಕೆಲವು ಪ್ರಮುಖರು ಜನಾಂಗದ ಮತವನ್ನು ಕಾಂಗ್ರೆಸ್‌ಗೆ ನೀಡಬೇಕು ಎಂದು ಕರೆ ನೀಡುತ್ತಿದ್ದಾರೆ. ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೇನೆಯಲ್ಲಿ ಅರೆಭಾಷೆ ಗೌಡ ಹಾಗೂ ಒಕ್ಕಲಿಗ ಸಮುದಾಯದ ಜನ ಇದ್ದಾರೆ. ಸೇನೆಗಾಗಿ ಪ್ರಧಾನಿ ಮೋದಿ ಅವರು ಏನು ಕೊಡುಗೆ ನೀಡಿದ್ದಾರೆ ಎಂಬ ಅರಿವು ಅವರಿಗಿದೆ. ಜಾತಿಗಾಗಿ ಮತ ಹಾಕಿ ಎಂಬ ನಾಯಕರ ಮಾತನ್ನು ಯಾರೂ ಕೇಳುವುದಿಲ್ಲ. ಕಾಂಗ್ರೆಸ್ ಅರೆಭಾಷೆ ಹಾಗೂ ಒಕ್ಕಲಿಗ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಹೇಶ್ ಜೈನಿ ಕಿಡಿ ಕಾರಿದರು.

ಯಾವುದೇ ವ್ಯಕ್ತಿ ಸಮುದಾಯವನ್ನು ಪ್ರತಿನಿಧಿಸುವಾಗ ಆಚಾರ ವಿಚಾರ, ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಬೇಕೆ ಹೊರತು ರಾಜಕೀಯ ಮಾಡಬಾರದು. ಒಂದು ಪಕ್ಷವನ್ನು ಒಲೈಸುವುದಾದರೆ ಆ ಪಕ್ಷದಲ್ಲಿ ಗುರುತಿಸಿಕೊಂಡು ಪ್ರಚಾರ ನಡೆಸಲಿ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ತಳೂರ್ ಕಿಶೋರ್ ಕುಮಾರ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಂದು ಜಾತಿ, ವರ್ಗಕ್ಕೆ ಸಿಮೀತವಾದ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದರು.ಗುರುವಾರ ಜಿಲ್ಲೆಗೆ ಸದಾನಂದ ಗೌಡ ಭೇಟಿ ನೀಡಲಿದ್ದು, ಕುಶಾಲನಗರ, ಶಾಂತಳ್ಳಿ, ಬೆಟ್ಟಗೇರಿ ಹಾಗೂ ಭಾಗಮಂಡಲದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. 19ರಂದು ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಮಡಿಕೇರಿಯ ಮಹದೇವಪೇಟೆಯಿಂದ ರೋಡ್ ಶೋ ಮಾಡಲಿದ್ದಾರೆ. ಅಲ್ಲದೆ ಬುಧವಾರ ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಯದುವೀರ್ ಸಂಸದರಾಗಬೇಕು ಅವರು ಹಾಗೂ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಾಂಗೀರ ಸತೀಶ್‌, ನಗರ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ, ಬೆಟ್ಟಗೇರಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಹಾಗೂ ಪ್ರಮುಖರಾದ ಬೆಪ್ಪುರನ ಮೇದಪ್ಪ ಸುದ್ದಿಗೋಷ್ಠಿಯಲ್ಲಿದ್ದರು.