ಯಗಟಿ, ಚೌಳ ಹಿರಿಯೂರು ಮೊರಾರ್ಜಿ ಶಾಲೆಗೆ ₹44 ಕೋಟಿ ಮಂಜೂರು

| Published : Aug 26 2024, 01:36 AM IST

ಸಾರಾಂಶ

ಕಡೂರುಕ್ಷೇತ್ರದ ಯಗಟಿಯ ಮೊರಾರ್ಜಿ ವಸತಿ ಶಾಲೆ ನಿರ್ಮಾಣಕ್ಕೆ 22 ಕೋಟಿ ರು, ಚೌಳ ಹಿರಿಯೂರು ಮೊರಾರ್ಜಿ ವಸತಿ ಶಾಲೆ ಕಟ್ಟಡಕ್ಕೆ 22 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.

ಯಳ್ಳಂಬಳಸೆ ಗ್ರಾಮದಲ್ಲಿ ಶಾಸಕ ಆನಂದ್‌ ಕೆರೆಗೆ ಬಾಗಿನ ಅರ್ಪಣೆ

ಕನ್ನಡಪ್ರಭ ವಾರ್ತೆ, ಕಡೂರು

ಕ್ಷೇತ್ರದ ಯಗಟಿಯ ಮೊರಾರ್ಜಿ ವಸತಿ ಶಾಲೆ ನಿರ್ಮಾಣಕ್ಕೆ 22 ಕೋಟಿ ರು, ಚೌಳ ಹಿರಿಯೂರು ಮೊರಾರ್ಜಿ ವಸತಿ ಶಾಲೆ ಕಟ್ಟಡಕ್ಕೆ 22 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.

ಯಳ್ಳಂಬಳಸೆ ಗ್ರಾಮದಲ್ಲಿ ಗ್ರಾಮದವರೊಂದಿಗೆ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು. 0. 672 ಟಿಎಂಸಿ ನೀರಿನ ಸಾಮರ್ಥ್ಯದ ಈ ವಿಶಾಲವಾದ ಕೆರೆ ಕೋಡಿ ಬಿದ್ದು ಹರಿಯುತ್ತಿದೆ. ನಾನು ಶಾಸಕನಾದ ನಂತರ ಆರ್.ಆರ್. ಆರ್ ಯೋಜನೆ ಯಲ್ಲಿ ಈ ಕೆರೆ ಅಭಿವೃದ್ಧಿಗೆ 4 ಕೋಟಿ ರು. ಪ್ರಸ್ತಾವನೆ ಕಳಿಸಿದ್ದು ಅಕ್ಟೋಬರ್ ನಲ್ಲಿ ಅನುದಾನ ಬರಲಿದೆ ಎಂದರು.

ಯಳ್ಳಂಬಳಸೆಯಿಂದ ಮಠದ ವರೆಗಿನ ರಸ್ತೆಗೆ 4 ಕೋಟಿ ರು.ಗಳ ಅನುದಾನ ನೀಡಲಾಗಿದೆ. ಯಳಗೊಂಡನಹಳ್ಳಿ ರಸ್ತೆ ಅಭಿವೃದ್ಧಿಗೂ ಅನುದಾನ ನೀಡಲಾಗುವುದು. ಈ ಗ್ರಾಮದ ದೇವಾಲಯ ಅಭಿವೃದ್ಧಿಗೆ ಶೀಘ್ರ ಹಣ ಬಿಡುಗಡೆ ಮಾಡಿಸುತ್ತೇನೆ. ಗ್ರಾಮದ ಕಸ್ತೂರಬಾ ನೂತನ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಿನ ವರ್ಷ ಬರಲಿದ್ದು, ಕುಪ್ಪಾಳಿನ ಅಲ್ಪ ಸಂಖ್ಯಾತರ ಶಾಲೆಯನ್ನು ವಿದ್ಯಾರ್ಥಿಗಳ ಹಾಸ್ಟೆಲ್ ಆಗಿ ಪರಿವರ್ತಿಸಲು 17 ಕೋಟಿ ರು. ಮಂಜೂರು ಮಾಡಿಸಿದ್ದು ಟೆಂಡರ್ ಹಂತದಲ್ಲಿವೆ ಎಂದರು. ಯಳ್ಳಂಬಳಸೆ ಗ್ರಾಮ ನನ್ನ ತವರು ಮನೆಯಂತಾಗಿದೆ ತಾವು ಗೆದ್ದಾಗಲೂ ಸೋತಾಗಲು ಈ ಗ್ರಾಮದ ಜನ ಅದೇ ಪ್ರೀತಿ ತೋರಿಸಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಮ್ಮ ಕೆರೆ ತುಂಬಿದ್ದು ರೈತರಲ್ಲಿ ಸಂತಸ ಮೂಡಿದೆ. ಹಾಯುವಳಿಗೆ ಈ ಕೆರೆಯ ಯಾವುದೇ ನೀರು ಬಳಸದ ಕಾರಣ ಕೆರೆಯಲ್ಲಿ ಸದಾ ನೀರಿರುತ್ತದೆ. ಅಲ್ಲದೆ ಸುತ್ತಮುತ್ತಲಿನ ಅಂತರ್ಜಲ ಕೂಡ ಅಭಿವೃದ್ಧಿ ಯಾಗುತ್ತದೆ. ಗ್ರಾಮಕ್ಕೆ ಆಗಬೇಕಿರುವ ಕೆಲಸಗಳ ಕುರಿತು ಶಾಸಕರಿಗೆ ಮನವಿ ಮಾಡಲಾಗಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಎಂಆರ್‌ಟಿ ಸುರೇಶ್ ಮಾತನಾಡಿ, ಶಾಸಕರು ಬಹಳ ಸೌಮ್ಯಸ್ವಭಾದವರು. ತಾಳ್ಮೆಯಿಂದ ಆಲಿಸುವ ಅವರಿಗೆ ಜನ ತಮಗೆ ಆಗಬೇಕಾಗಿರುವ ಕೆಲಸಗಳನ್ನು ನೇರವಾಗಿ ತಿಳಿಸಿ ಪರಿಹರಿಸಿ ಕೊಳ್ಳಬಹುದು. ಇಂತಹ ಸಂಭ್ರಮದ ಕಾರ್ಯಕ್ರಮಗಳು ಪ್ರತಿ ವರ್ಷವೂ ಅವರ ನೇತೃತ್ವದಲ್ಲಿ ನಡೆಯಲಿ ಎಂದು ಆಶಿಸಿದರು.ಗ್ರಾಪಂ ಸದಸ್ಯರಾದ ಈಶ್ವರಪ್ಪ, ಸಯ್ಯದ್ ಸಲೀಂ, ಚೈತ್ರ, ಜಗದೀಶ್, ಕುಮಾರ್,ಉಪನ್ಯಾಸಕ ಮಂಜುನಾಥ್, ಎ.ಇ. ಮಂಜುನಾಥ್, ಪಿಎಸ್ಐ ಮಂಜುನಾಥ್ ಗ್ರಾಮಸ್ಥರು ಉಪಸ್ಥಿತರಿದ್ದರು.

-- ಕೋಟ್‌--

ನಾಡದೇವತೆ ಚಾಮುಂಡೇಶ್ವರಿ ಕೃಪೆಯಿಂದ ನಾಡಿನ ಎಲ್ಲ ಕೆರೆಗಳು ತುಂಬಿ ಹರಿಯುತ್ತಿರುವುದು ತಮಗೆ ಸಂತಸ ತಂದಿದೆ. ಕಳೆದ ವರ್ಷ ಬರಗಾಲದಿಂದ ನೀರಿಗೆ ಪರದಾಡುವ ಸ್ಥಿತಿ ಇತ್ತು. ದೈವ ಕೃಪೆಯಿಂದ ಕೆರೆಕಟ್ಟೆಗಳು ತುಂಬಿವೆ. ಪ್ರಕೃತಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಎಂಬ ಕುತಂತ್ರಿಗಳ ಆಪಾದನೆ ಈ ಬಾರಿ ಸುಳ್ಳಾಗಿದೆ. ಟೀಕಿಸಿ ಮಾತನಾಡುವವರಿಗೆ ಚಾಮುಂಡೇಶ್ವರಿ ದೇವಿ ಉತ್ತರ ನೀಡಿದ್ದಾರೆ.

-- ಕೆ.ಎಸ್ ಆನಂದ್.

25ಕೆಕೆಡಿಯು2.

ಯಳ್ಳಂಬಳಸೆ ಗ್ರಾಮದಲ್ಲಿ ಶಾಸಕ ಕೆ.ಎಸ್ ಆನಂದ್ ಗ್ರಾಮದವರೊಂದಿಗೆ ಕೆರೆಗೆ ಬಾಗಿನ ಅರ್ಪಿಸಿದರು.