ವಿಭಿನ್ನ ರೀತಿಯ ಕಾರ್ಯಕ್ರಮ ಸಂಘಟನೆ, ಉತ್ಸವ ಹಾಗೂ ಆಚರಣೆಗಳಲ್ಲಿ ಹೊಸ ಬಗೆಯ ಪರಿಕಲ್ಪನೆ ತರುವ ಅಗತ್ಯವಿದೆ ಎಂದು ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಮಂಗಳೂರು: ವಿಭಿನ್ನ ರೀತಿಯ ಕಾರ್ಯಕ್ರಮ ಸಂಘಟನೆ, ಉತ್ಸವ ಹಾಗೂ ಆಚರಣೆಗಳಲ್ಲಿ ಹೊಸ ಬಗೆಯ ಪರಿಕಲ್ಪನೆ ತರುವ ಅಗತ್ಯವಿದೆ ಎಂದು ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆ ನೇತೃತ್ವದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮವಾಗಿ ಆಚರಿಸಲಾಗುವ 14ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ-2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಳಮದ್ದಲೆಯನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಗತ್ಯ ವಾಗಿದ್ದು, ಯಕ್ಷಾಂಗಣದ ಕಾರ್ಯ ನಿರಂತರ ಮುಂದುವರಿಯಲಿ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಕರಾವಳಿಯ ಜನತೆಯ ಭಾಷಾ ಶುದ್ದತೆ ಮತ್ತೊಂದು ಕಡೆ ಸಿಗದು. ಅದಕ್ಕೆ ಯಕ್ಷಗಾನದಂತಹ ಕಲೆಗಳೇ ಕಾರಣ ಎಂದರು. ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಪುರಸ್ಕಾರ ಪ್ರದಾನ:
ಉದ್ಯಮಿ, ಕಲಾಪೋಷಕ ಹಾಗೂ ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್.ಶೆಟ್ಟಿ ಥಾಣೆ ಅವರಿಗೆ 2026 ನೇ ಸಾಲಿನ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲಾಯಿತು. ಅವರು ಪತ್ನಿ ಶಿಲ್ಪಾ ವಿ.ಶೆಟ್ಟಿ ಜೊತೆ ಸನ್ಮಾನ ಸ್ವೀಕರಿಸಿದರು. ಯಕ್ಷಾಂಗಣದ ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಸನ್ಮಾನ ಫಲಕ ವಾಚಿಸಿದರು.ಸಿಎ ಎಸ್.ಎಸ್.ನಾಯಕ್, ಥಾಣೆ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಎಂ.ಶೆಟ್ಟಿ, ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಜಯವಂತ ನಾಯಕ್, ನಿಟ್ಟೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಮಂಗಳೂರು ವಿವಿ ಯಕ್ಷಗಾನ ಕೇಂದ್ರದ ಡಾ.ಸತೀಶ್ ಕೊಣಾಜೆ, ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮಿ ನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಜಗದೀಶ ಪೂಜಾರಿ ಇರಾ ಆಚೆಬೈಲು, ಸಿದ್ಧಾರ್ಥ ಅಜ್ರಿ, ವಾಸಪ್ಪ ಶೆಟ್ಟಿ ಮತ್ತಿತರರು ಇದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು.