ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಅಮೆರಿಕದಲ್ಲಿ ಯಕ್ಷಗಾನ ತನ್ನ ಛಾಪು ಮೂಡಿಸಲು ಸಾಧ್ಯವಾಗಿದೆ. ಆದರೆ ಅದನ್ನು ಕ್ರೋಢೀಕರಿಸುವ ಅಗತ್ಯವೂ ಇದೆ ಎಂದು ಸಾಗರೋತ್ತರ ಯಕ್ಷಗಾನ ಗುರು ಡಾ.ರಾಜೇಂದ್ರ ಕೆದ್ಲಾಯ ಹೇಳಿದರು.ಅವರು ಶನಿವಾರ ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಇದರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಕ್ಷಗಾನ ಶಾಲೆಯನ್ನು ನಡೆಸುತ್ತಿರುವ ಅನುಭವವು ಒಂದು ರೋಮಾಂಚನಕಾರಿ ಅನುಭವವಾಗಿದೆ ಮತ್ತು ಹಲವಾರು ಮಕ್ಕಳು ಮತ್ತು ಯುವಕರು ಯು.ಎಸ್.ನಲ್ಲಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.ಅಲ್ಲಿನ ಯಕ್ಷಗಾನ ವಿದ್ಯಾರ್ಥಿಗಳು ತಮ್ಮ ಸಂಭಾಷಣೆಗಳನ್ನು ಇಂಗ್ಲಿಷ್‌ನಲ್ಲಿ ಮಾಡುತ್ತಿದ್ದರೂ ಸಹ, ಅದು ಸಹಜ ಮತ್ತು ಸ್ವಾಭಾವಿಕವಾಗಿ ಕಾಣುತ್ತದೆ. ಯಕ್ಷಗಾನದ ಕಲಿಕೆ ಮತ್ತು ಕಲಿಸುವಿಕೆ, ಹೊರದೇಶದಲ್ಲಿದ್ದು ನನ್ನೂರಿನ ಜೊತೆಗಿನ ಸಂಬಂಧವನ್ನು ಜೀವಂತವಾಗಿಡುತ್ತದೆ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದ ನಡೆಸಿಕೊಟ್ಟರು. ಡಾ.ಭ್ರಮರಿ ಶಿವಪ್ರಕಾಶ್, ಡಾ.ರಾಜಾರಾಂ ತೋಳ್ಪಾಡಿ, ಚಿತ್ರ ನಿರ್ಮಾಪಕ ಕ್ಲಿಂಗ್ ಜಾನ್ಸನ್, ಡಾ.ರವೀಂದ್ರನಾಥನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.ಮಣಿಪಾಲ ಕೆಎಂಸಿಯಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಡಾ.ರಾಜೇಂದ್ರ ಕೆದ್ಲಾಯರು, 2003ರಲ್ಲಿ ಅಮೆರಿಕಕ್ಕೆ ಹೋದರು. ಅಲ್ಲಿ ಅವರು ವೃತ್ತಿಯ ಜೊತೆಗೆ ಯಕ್ಷಗಾನ ಕಲಿಸಲು ಮತ್ತು ಪ್ರದರ್ಶಿಸಲು ಪ್ರಾರಂಭಿಸಿದರು ಮತ್ತು ಇಂದು ಅವರ ಯಕ್ಷಗಾನ ಶಾಲೆಯು ಅಮೆರಿಕದಲ್ಲಿ ಗಮನಾರ್ಹವಾದ ಛಾಪು ಮೂಡಿಸಿದೆ. ಪ್ರೊ. ಉದ್ಯಾವರ ಮಾಧವಾಚಾರ್ಯ ನಿರ್ಮಾಣದ ‘ಪಾಂಚಾಲಿ’ ಪಾತ್ರಕ್ಕೆ ಹೆಸರುವಾಸಿಯಾದ ಡಾ.ಕೆದ್ಲಾಯ ಅವರು ಈ ಹಿಂದೆ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಕಲಿತವರು.