ಯಕ್ಷಗಾನವು ಕೇವಲ ಮನರಂಜನೆಗೆ ಸೀಮಿತವಲ್ಲ. ಇದು ಪರಮಾತ್ಮನಿಗೆ ಸಲ್ಲಿಸುವ ಕಲಾಸೇವೆ
ದೊಡ್ಮನೆ ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ
ಕನ್ನಡಪ್ರಭ ವಾರ್ತೆ ಸಿದ್ದಾಪುರಯಕ್ಷಗಾನವು ಕೇವಲ ಮನರಂಜನೆಗೆ ಸೀಮಿತವಲ್ಲ. ಇದು ಪರಮಾತ್ಮನಿಗೆ ಸಲ್ಲಿಸುವ ಕಲಾಸೇವೆ ಎಂದು ಉದ್ಯಮಿ, ಯುವ ಮುಖಂಡ ಅನಂತಮೂರ್ತಿ ಹೆಗಡೆ ಶಿರಸಿ ಹೇಳಿದರು.
ತಾಲೂಕಿನ ದೊಡ್ಮನೆಯಲ್ಲಿ ಶನಿವಾರ ದೊಡ್ಮನೆ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಾಸಂಘಟನೆ ಸುಲಭ ಸಾಧ್ಯವಲ್ಲ, ಅದೊಂದು ಕ್ಲಿಷ್ಟಕರ ಕೆಲಸ. ದೇಶಕಂಡ ಅಪ್ರತಿಮ ಮುತ್ಸದ್ಧಿ ರಾಮಕೃಷ್ಣ ಹೆಗಡೆಯವರು ಜನಿಸಿದ ದೊಡ್ಮನೆ ಊರಿನಲ್ಲಿ ಯಕ್ಷೋತ್ಸವ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಯಕ್ಷಗಾನವು ನಮ್ಮ ಸಂಸ್ಕೃತಿಯ ಬೇರು. ಸಮಾಜಕ್ಕೆ ಪೂರಕವಾದುದನ್ನು ಯಕ್ಷಗಾನ ಕಲೆ ನೀಡುತ್ತದೆ. ನವರಸಗಳನ್ನು ಒಳಗೊಂಡ ಯಕ್ಷಗಾನವು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕಲಾಭಿಮಾನಿಗಳೊಂದಿಗೆ ಕರಳು ಬಳ್ಳಿಯ ಸಂಬಂಧ ಹೊಂದಿದೆ. ಸನ್ಮಾನಿತ ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆ ಯಕ್ಷಗಾನ ಕಲೆಯ ಸಂಪ್ರದಾಯ, ಚೌಕಟ್ಟನ್ನು ಕಾಯ್ದುಕೊಂಡು ಬಂದವರು ಎಂದರು. ಯಕ್ಷಗಾನ ಕಲಾ ಅಕಾಡೆಮಿ ಸದಸ್ಯ ವಿದ್ಯಾಧರರಾವ್ ಜಲವಳ್ಳಿ ಮಾತನಾಡಿ, ಹಿಂದೆಲ್ಲಾ ಕಲಾವಿದರು ಆರ್ಥಿಕ ಲಾಭ ಪಡೆಯದೆ ಯಕ್ಷಗಾನ ಕಲೆಯನ್ನು ಸಮೃದ್ಧಿಗೊಳಿಸಿದ್ದರು. ಇಂದು ಆರ್ಥಿಕ ಲಾಭ ಪಡೆಯುತ್ತಿದ್ದರೂ ಕಲೆಯ ಮೌಲ್ಯ ವೃದ್ಧಿಸುತ್ತಿಲ್ಲ. ಕಲಾವಿದರಾದ ನಾವೇ ಈ ಕಲೆಯನ್ನು ಹಾಳುಮಾಡುತ್ತಿದ್ದಂತೆ ಅನಿಸುತ್ತದೆ. ಎಲ್ಲಿಯೂ ರಾಜಿಮಾಡಿಕೊಳ್ಳದೇ ರಾಜಹಾಸ್ಯ ನೀಡುವ ಕಲಾವಿದ ಚಪ್ಪರಮನೆಯವರನ್ನು ಸನ್ಮಾನಿಸಿದ್ದು ಸಂತಸದಾಯಕ. ಅವರ ಜೊತೆ ಪಾತ್ರ ಮಾಡುತ್ತಿರುವುದು ನಮ್ಮ ಸೌಭಾಗ್ಯ ಎಂದರು.ತಾಲೂಕಾ ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ, ಹವ್ಯಾಸಿ ಯಕ್ಷಗಾನ ಕಲಾವಿದ ಶ್ರೀಧರ ಭಟ್ಟ ಗಡಿಹಿತ್ಲು ಉಪಸ್ಥಿತರಿದ್ದರು. ಈ ಸಂದರ್ಭ ಯಕ್ಷಗಾನ ಕಲಾರಂಗದ ಖ್ಯಾತ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತ ಶ್ರೀಧರ ಹೆಗಡೆ ಮಾತನಾಡಿ, ವಿಕೃತಿ ಮತ್ತು ಪ್ರಕೃತಿಯ ನಡುವೆ ಸಂಸ್ಕೃತಿ ಹುಟ್ಟಿದೆ. ಸಂಸ್ಕಾರವನ್ನು ಕಟ್ಟಿಕೊಡಲು ಯಕ್ಷಗಾನದಂತಹ ಕಲೆ ಅಗತ್ಯ. ಸುಸಂಸ್ಕೃತರ ಸೃಷ್ಟಿ ಕಲಾವಿದನ ಜವಾಬ್ದಾರಿ. ಯಕ್ಷಗಾನದಲ್ಲಿ ಹಾಸ್ಯಕ್ಕೆ ಮಾತೃಸ್ಥಾನವಿದ್ದು ಇದು ಅಸಂಬದ್ಧವಾಗಬಾರದು. ಕಲೆ ಕಲೆಯಾಗಿಯೇ ಬೆಳೆಯಲಿ, ಕಲೆಯ ಮೇಲೆ ಕಪ್ಪುಕಲೆ ಕೂರದಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಪ್ರಸಾರಕ ಸಮಿತಿ ಅದ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ ಯಕ್ಷಗಾನ ಕಲೆಗೆ ಎಲ್ಲಾ ಸಮಾಜದ ಅಭಿಮಾನಿಗಳಿದ್ದಾರೆ. ಈ ಕಲೆಗೆ ಸುರಕ್ಷಿತ ಭವಿಷ್ಯವಿದೆ. ಚಪ್ಪರಮನೆ ಊರಿಗೆ ಹೆಸರು ತಂದಿರುವ ಶ್ರೀಧರ ಹೆಗಡೆಯವರು ಹೆಮ್ಮೆಯ ಕಲಾವಿದರು. ಹಾಸ್ಯ-ಅಭಿರುಚಿಯಲ್ಲಿ ರಾಜಿ ಮಾಡಿಕೊಳ್ಳದೆ ಪಾತ್ರ ಕಟ್ಟಿಕೊಡುವವರು. ದೊಡ್ಮನೆಯಲ್ಲಿ ಹೊಸ ಸಂಘಟನೆ ಹುಟ್ಟಿಕೊಂಡಿದ್ದು ಆ ಸಂಘಟನೆಯ ಮೂಲಕ ಈ ಭಾಗದ ಕಲಾವಿದರನ್ನು ಗೌರವಿಸಿದ್ದು ಸಂತಸದಾಯಕ ಎಂದರು.ಕಾರ್ಯಕ್ರಮ ವ್ಯವಸ್ಥಾಪಕರಾದ ದರ್ಶನ ಹೆಗಡೆ, ಗೌರೀಶ ಹೆಗಡೆ ಇತರರು ಉಪಸ್ಥಿತರಿದ್ದರು. ನಾರಾಯಣ ಹೆಗಡೆ ನಿರ್ವಹಿಸಿದರು. ಗಜಾನನ ಹೆಗಡೆ ವಂದಿಸಿದರು. ನಂತರ ಪೆರ್ಡೂರು ಮೇಳ ಹಾಗೂ ಖ್ಯಾತ ಕಲಾವಿದರಿಂದ ರುದ್ರಕೋಪ, ಮಾಗಧ ಹಾಗೂ ಭದ್ರಸೇನ ಯಕ್ಷಗಾನಗಳು ಪ್ರದರ್ಶನಗೊಂಡವು.