ಸಾರಾಂಶ
ಶೃಂಗೇರಿ: ಪಾರಂಪರಿಕವಾಗಿ ಬೆಳೆದು ಬಂದಿರುವ ಯಕ್ಷಗಾನ ಕಲೆ ನವರಸ ಕಲೆಗಳಲ್ಲಿ ಪ್ರಮುಖ ಕಲೆಯಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರೇಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಈಶ್ವರಚಂದ್ರ ನಿಡ್ಲೆ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಧರ್ಮಸ್ಥಳ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಯಕ್ಷ ಅಭಿಮಾನಿ ಬಳಗ ಶೃಂಗೇರಿ ಇವರ ಸಹಯೋಗದಲ್ಲಿ ನಡೆದ ಯಕ್ಷಗಾನ ಬಯಲಾಟ ಪ್ರದರ್ಶನ, ಕಲಾವಿದರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಯಕ್ಷಗಾನ ಕಲೆ ಕರಾವಳಿಯಲ್ಲಿ ಹುಟ್ಟಿದ್ದರೂ ಮಲೆನಾಡಿನಲ್ಲಿ ಇಂದಿಗೂ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಭಾಗವತಿಕೆ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಥಾವಸ್ತುಗಳೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಈ ಕಲೆ ಇಂದಿಗೂ ತನ್ನ ಪರಂಪರೆ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದು ಹೇಳಿದರು. ಮೊಬೈಲ್, ಸಿನಿಮಾ, ಧಾರವಾಹಿಯಂತಹ ಸ್ಪರ್ಧಾತ್ಮಕ ಯುಗದಲ್ಲಿ ಈ ಕಲೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಈ ಕಲೆಯ ಅಳಿವು ಉಳಿವು ಪ್ರೇಕ್ಷಕರ ಕೈಯಲ್ಲಿದೆ. ಒಂದು ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಬೇಕಾದರೆ ಕಲಾವಿದರು, ಕಾರ್ಯಕ್ರಮ ನಿರ್ವಾಹಕರು, ಧ್ವನಿಬೆಳಕು, ಜೊತೆಗೆ ಪ್ರೇಕ್ಷಕರ ಸಹಾಯ ಅತಿಮುಖ್ಯವಾಗಿದೆ ಎಂದರು.
ವೃತ್ತಿಪರ ಯಕ್ಷಗಾನ ಕಲಾವಿದರಿಂದ ಮಳೆಗಾಲದಲ್ಲಿ ಆದಾಯವಿರುವುದಿಲ್ಲ. ಇದನ್ನರಿತ ನನ್ನ ತೀರ್ಥರೂಪರಾದ ನಿಡ್ಲೆ ಗೋವಿಂದ ಭಟ್ಟರು ಸುಮಾರು 38 ವರ್ಷಗಳ ಹಿಂದೆ ಈ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದರು. ಇದು ಇಂದಿಗೂ ರಾಜ್ಯ ಹೊರರಾಜ್ಯಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಆರ್ಥಿಕವಾಗಿ ಬೆನ್ನುಲುಬಾಗಿ ನಿಲ್ಲುವುದರ ಜೊತೆಗೆ ಯಕ್ಷಗಾನ ಕಲಾಪರಂರೆಯನ್ನು ಉಳಿಸಿಕೊಂಡು ಹೋಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಮಂಡಳಿ ಸಂಚಾಲಕ ನಾಗೇಶ್ ಕಾಮತ್, ಪಟ್ಟಣ ಪಂಚಾಯಿತಿ ಸದಸ್ಯೆ ಲತಾಗುರುದತ್, ಸರ್ಕಾರಿ ಜೂನಿಯರ್ ಕಾಲೇಜಿನ ಸಂಸ್ಕ್ರತ ಶಿಕ್ಷಕ ಡಾ.ಮಹೇಶ್ ಕಾಕತ್ಕರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ರವಿಶಂಕರ್, ಮೆಣಸೆ ಸಂಸ್ಕ್ರತ ಕಾಲೇಜಿನ ರವಿಶಂಕರ್, ಕಲಾವಿದರಾದ ದರ್ಬೆ ಶಿವಪ್ರಕಾಶ್, ಜನಾರ್ದನ ಮಂಡಗಾರು, ನೈಬಿ ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಕ್ತ ಅಂಬರೀಶ ಹಾಗೂ ಗಜೇಂದ್ರ ಮೋಕ್ಷ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು. ಜನಾರ್ದನ ಮಂಡಗಾರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.