ಸಾರಾಂಶ
ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇದರ ಹುಟ್ಟಿನಿಂದಲೂ ಸಂಸ್ಥೆಯ ಕಾರ್ಯಚಟುವಟಿಕೆಯನ್ನು, ಬೆಳವಣಿಗೆಯನ್ನು ಕಂಡ ಪ್ರತ್ಯಕ್ಷ ಸಾಕ್ಷಿ ನಾನು. ದಿ| ಸದಾನಂದ ಹೆಬ್ಬಾರ ಹಾಗೂ ದಿ. ನಾರ್ಣಪ್ಪ ಉಪ್ಪೂರರ ಭವ್ಯ ಕನಸಿನ ಕೂಸಿದು. ಭಾಗವತಿಕೆಯಲ್ಲಿ ಶ್ರೇಷ್ಠರೆನಿಸಿದ ಕಾಳಿಂಗ ನಾವಡ, ಧಾರೇಶ್ವರರಂತಹ ಸಾವಿರಾರು ಕಲಾವಿದರನ್ನು ಯಕ್ಷ ಪ್ರಪಂಚಕ್ಕೆ ನೀಡಿದ ಸಂಸ್ಥೆ ಇದು. ಯಕ್ಷ ಸರಣಿ ಕಾರ್ಯಕ್ರಮಗಳು, ಸಪ್ತಾಹಗಳು, ಭಾಗವತಿಕೆ, ಮದ್ದಲೆ ಚಂಡೆಯ ನಿರಂತರ ತರಗತಿಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಬಹುದೊಡ್ಡ ದೇಣಿಗೆ ನೀಡಿದೆ. ಇದೀಗ ತ್ರಿಕೂಟ ಯಕ್ಷ ಸಂಭ್ರಮದಲ್ಲಿ ಸಂಸ್ಥೆ ನೀಡುತ್ತಿರುವ ಯಕ್ಷಗಾನ ಪ್ರಸಂಗ ಅಪರೂಪದ್ದು, ಈ ಪ್ರದರ್ಶನ ಯಶಸ್ವಿ ಕಾಣಲೆಂದು ಸಾಸ್ತಾನ ಎಡಬೆಟ್ಟಿನ ಧಾರ್ಮಿಕ ಮುಂದಾಳು, ವೇದಮೂರ್ತಿ ವೆಂಕಪ್ಪಯ್ಯ ಭಟ್ಟರು ಹಾರೈಸಿದರು. ಅವರು ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಆಯೋಜಿಸಲಾದ ಯಕ್ಷ ತ್ರಿಕೂಟ ಸಂಭ್ರಮದ ಕೊನೆಯ ದಿನದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.ರಾಘವೇಂದ್ರ ಮಯ್ಯ ಸ್ವಾಗತಿಸಿದರು. ಗಣೇಶ್ ಆಚಾರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕಲಾಕೇಂದ್ರದ ಕಲಾವಿದರಿಂದ ‘ಅನುಸಾಲ್ವ ಗರ್ವಭಂಗ ಎಂಬ ಯಕ್ಷಗಾನ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು.