ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾವರ
ಯಕ್ಷಗಾನ ಪರಿಪೂರ್ಣ ಕಲೆ. ಯಕ್ಷಗಾನದ ಎಲ್ಲಾ ಪಟ್ಟುಗಳನ್ನು ಯಲಗುಪ್ಪ ರೂಡಿಸಿಕೊಂಡು ಸಮರ್ಥ ಕಲಾವಿದರಾಗಿದ್ದಾರೆ. ಬಡಗು-ತೆಂಕು ತಿಟ್ಟಿನಲ್ಲಿ ತಮ್ಮ ಹೆಸರನ್ನು ಮೂಡಿಸಿದ್ದಾರೆ ಎಂದು ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಪಟ್ಟಣದ ಮೂಡಗಣಪತಿ ದೇವಾಲಯದ ಸಭಾಭವನದಲ್ಲಿ ನಡೆದ ಯಲಗುಪ್ಪ ಯಕ್ಷಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚ್ಚಾರಿತ್ರ್ಯ, ಸಜ್ಜನತೆ ಯ ಮೂಲಕ ಸುಬ್ರಹ್ಮಣ್ಯ ಯಲಗುಪ್ಪಾ ಈ ಕೀರ್ತಿ ಬೆಳಗಿಸಿದ್ದಾರೆ. ಯಕ್ಷಗಾನ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದೆ. ಮಕ್ಕಳು ಇಂತಹ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಎಂದು ಕರೆ ನೀಡಿದರು.ಕಳೆದ ೩೫ ವರ್ಷಗಳಿಂದ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ತ್ರೀ ವೇಷ ಕಲಾವಿದರಾಗಿ ಹೆಸರುವಾಸಿಯಾಗಿರುವ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ದಂಪತಿಗಳನ್ನು ತಾಲೂಕಿನ ಜನರು, ಅಭಿಮಾನಿಗಳು ಸೇರಿ ಗೌರವ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಿದರು.
ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆಗೆ ₹೫ ಲಕ್ಷ ಧನ ಸಹಾಯ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.ಗೌರವ ಸ್ವೀಕರಿಸಿದ ಯಲಗುಪ್ಪ ಮಾತನಾಡಿ, ಈ ಗೌರವ ನನಗೆ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಎಲ್ಲರೂ ಮನೆಮಗನಂತೆ ಕಂಡಿದ್ದಾರೆ. ಮನೆಯಂಗಳದಲ್ಲಿ ಈ ಗೌರವ ಸಿಕ್ಕಿದ್ದು ಸಾರ್ಥಕ ಕ್ಷಣ. ಚಿಟ್ಟಾಣಿ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಶೇಣಿ ಗೋಪಾಲ ಕೃಷ್ಣ ಅವರ ಜೊತೆಗೂ ಪಾತ್ರ ನಿರ್ವಹಿಸಿದ್ದರ ಹೆಮ್ಮೆಯ ಬಗ್ಗೆ ನೆನಪು ಹಂಚಿಕೊಂಡರು.
ಮಾನವ ಹಕ್ಕು ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಮಾತನಾಡಿ, ಮಾನಸಿಕ ಒತ್ತಡದಿಂದ ಹೊರಬರಲು ನಾವು ಮನರಂಜನೆ ಕಾರ್ಯಕ್ರಮಕ್ಕೆ ಮೊರೆ ಹೋಗುತ್ತೇವೆ. ಕಲಾವಿದರ ಸಾಧನೆ ಗುರ್ತಿಸಿ ಗೌರವಿಸುವುದು ಮಹತ್ವದ್ದು. ಯಲಗುಪ್ಪ ಅವರ ರಂಗದಲ್ಲಿ ಚಾಲಾಕಿಯಾಗಿ ಪಾತ್ರ ಮಾಡುತ್ತಾರೆ. ಅವರು ತೆಂಕು-ಬಡಗು ಎರಡು ಶೈಲಿಯಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದಾರೆ ಎಂದರು.ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಮಾತನಾಡಿ, ಬಣ್ಣ ಹಚ್ಚಿದವರೆಲ್ಲ ಕಲಾವಿದರಾಗುವುದಿಲ್ಲ. ಕಲಾವಿದರಿಂದ ತಮ್ಮ ಊರುಗಳಿಗೆ ಹೆಸರು ತಂದುಕೊಡುತ್ತಾರೆ ಎಂದರೆ ಅವರ ಶ್ರಮ ಎಷ್ಟಿದೆ ಎಂದು ತಿಳಿಯುತ್ತದೆ. ಆ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಯಲಗುಪ್ಪಾ ಸಹ ತಮ್ಮ ಊರಿನ ಹೆಸರನ್ನು ಬೆಳೆಸಿದ್ದಾರೆ ಎಂದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಮಾತನಾಡಿದರು. ಸಿನಿಮಾ ನಟಿ ಪೂಜಾ ಗಾಂಧಿ ಮಾತನಾಡಿದರು. ನಂತರ ತಮ್ಮ ಸಿನಿಮಾದ ಹಾಡನ್ನು ಹಾಡಿ ನೆರೆದವರನ್ನು ರಂಜಿಸಿದರು. ಯಕ್ಷಗಾನ ಅಕಾಡಮಿ ಸದಸ್ಯ, ಕಲಾವಿದ ವಿದ್ಯಾಧರ ಜಲವಳ್ಳಿ ಶುಭ ಕೋರಿದರು. ನ್ಯಾಯವಾದಿ ನಾಗರಾಜ ನಾಯಕ ಅಂಕೋಲ, ಶಿವಾನಂದ ಹೆಗಡೆ, ಮಂಜುನಾಥ್ ನಾಯ್ಕ ಮಾತನಾಡಿದರು.ಖ್ಯಾತ ಯಕ್ಷಗಾನ ಪ್ರಸಂಗ ಕರ್ತ, ವಾಗ್ಮಿ ಪ್ರೊ. ಪ್ರವೀಣ್ ಕಿರಣಕೆರೆ ಯಲಗುಪ್ಪಾ ಅಭಿನಂದನಾ ನುಡಿಗಳನ್ನಾಡುತ್ತಾ ಅವರ ಜೀವನ, ಸಾಧನೆಯ ಬಗ್ಗೆ ಮಾತನಾಡಿದರು.
ಯಲಗುಪ್ಪ ಯಕ್ಷಾರ್ಚನೆ ಸಮಿತಿ ಅಧ್ಯಕ್ಷ ರಾಜು ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಡಿಎಫ್‌ಒ ನಾಗರಾಜ್ ನಾಯ್ಕ ತೊರ್ಕೆ, ಕಲಾಪೋಷಕ ಶಿವಾನಂದ ಹೆಗಡೆ ಕಡತೋಕಾ, ಜ್ಯೋತಿಷಿ ಅನಂತಣ್ಣ ಗಂಗೆ ಹಿರೇಮನೆ, ಡಾ. ಗೋಪಾಲಕೃಷ್ಣ ಶರ್ಮಾ, ಯಕ್ಷಗಾನ ಸಂಘಟಕ ಮನೋಜ ಭಟ್ ಹೆಗ್ಗಾರಹಳ್ಳಿ, ಡಾ. ಪ್ರಕಾಶ್ ನಾಯ್ಕ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಬಾಲಚಂದ್ರ ಮೇಸ್ತ, ಶ್ರೀನಿವಾಸ ಪೈ, ಶ್ರೀಕಾಂತ್ ಮೋಗೆರ, ಸಮಾಜಸೇವಕ ಮಂಜುನಾಥ್ ಎಲ್. ನಾಯ್ಕ ಉಪಸ್ಥಿತರಿದ್ದರು. ನಾಗರಾಜ್ ಖಾಸ್ಕಂಡ ನಿರೂಪಿಸಿದರು. ನಂತರ ಯಕ್ಷಗಾನ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))
;Resize=(128,128))