ಕೇರಳದಲ್ಲಿ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಹಾರಾಷ್ಟ್ರದಲ್ಲಿ ಲಾವಣಿ, ಆಂಧ್ರಪ್ರದೇಶದಲ್ಲಿ ಕೂಚಿಪುಡಿ ಇದ್ದಂತೆ ಕರ್ನಾಟಕದಲ್ಲಿ ಯಕ್ಷಗಾನ ರಾಜ್ಯ ಕಲೆಯಾಗಬೇಕು. ಈ ಕೂಗಿಗೆ ಯಕ್ಷಪ್ರೇಮಿಗಳು, ಕಲಾವಿದರು ಧ್ವನಿಯಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮನವಿ ಮಾಡಿದ್ದಾರೆ.
ಕುಂದಾಪುರ : ಕೇರಳದಲ್ಲಿ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಹಾರಾಷ್ಟ್ರದಲ್ಲಿ ಲಾವಣಿ, ಆಂಧ್ರಪ್ರದೇಶದಲ್ಲಿ ಕೂಚಿಪುಡಿ ಇದ್ದಂತೆ ಕರ್ನಾಟಕದಲ್ಲಿ ಯಕ್ಷಗಾನ ರಾಜ್ಯ ಕಲೆಯಾಗಬೇಕು. ಈ ಕೂಗಿಗೆ ಯಕ್ಷಪ್ರೇಮಿಗಳು, ಕಲಾವಿದರು ಧ್ವನಿಯಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮನವಿ ಮಾಡಿದ್ದಾರೆ.
ಅವರು ಇಲ್ಲಿನ ಸಾಲಿಗ್ರಾಮ ಬಳಿಯ ಹಂಗಾರಕಟ್ಟೆ - ಐರೋಡಿ ಯಕ್ಷಗಾನ ಕಲಾಕೇಂದ್ರದಲ್ಲಿ ಗೀತಾನಂದ ಫೌಂಡೇಶನ್ ಸಹಕಾರದಲ್ಲಿ 5 ನೇ ವರ್ಷದ ಯಕ್ಷಗಾನ ಸಪ್ತೋತ್ಸವ ಕಾಳಗೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಕ್ಷಗಾನಕ್ಕೆ ಇಂದು ವಿದ್ಯಾರ್ಥಿಗಳು, ಇಂಜಿನಿಯರ್ಗಳು, ವೈದ್ಯರು, ಶಿಕ್ಷಕರು ಸೇರಿದಂತೆ ಸುಶಿಕ್ಷಿತ ಮಂದಿ ಬರುತ್ತಿರುವುದು ಈ ಕಲೆಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಸ್ವಾಗತಾರ್ಹ. ಇದು ಪಡುವಲಪಾಯ ಯಕ್ಷಗಾನಕ್ಕೆ ಭದ್ರ ಭವಿಷ್ಯವನ್ನು ಹಾಕಿದೆ. ಈ ನಿಟ್ಟಿನಲ್ಲಿ ಹಂಗಾರಕಟ್ಟೆಯ ಯಕ್ಷಗಾನ ಕಲಾ ಕೇಂದ್ರ ತನ್ನ ವಿಭಿನ್ನ ಚಟುವಟಿಕೆಗಳ ಮೂಲಕ ಯಕ್ಷಗಾನ ಅಪಾರ ಕೊಡುಗೆ ನೀಡುತ್ತಿದೆ ಎಂದು ಅವರು ಶ್ಲಾಘಿಸಿದರು. ಹಿಂದೆ ಪ್ರದರ್ಶನ ಕಲೆಗಳಿಗೆ ರಾಜಾಶ್ರಯವಿತ್ತು. ಇಂದು ನಮ್ಮನಾಳುವ ಸರಕಾರದಿಂದ ಯಕ್ಷಗಾನಕ್ಕೆ ರಾಜ್ಯ ಕಲೆಯ ಸ್ಥಾನಮಾನ ಸಿಕ್ಕರೆ, ಕಲಾವಿದರ, ಕಲೆಯ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದೇನೆ ಎಂದು ಅವರು ಭಾವುಕರಾಗಿ ನುಡಿದರು. ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ, ಉದ್ಯಮಿ ಜೈನಾಡಿ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಮಹಾಲಕ್ಷ್ಮೀ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿ, ವಿಭವನ್ ಹೇರ್ಳೆ ವಂದಿಸಿದರು. ಸಂಗೀತ ವಿದ್ವಾನ್ ಲಕ್ಷ್ಮೀನಾರಾಯಣ ಉಪಾಧ್ಯಾಯ ಪಾಡಿಗಾರು ದಾಸರ ಪದ ಹಾಡಿದರು. ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಆರಂಭ ಯಕ್ಷಗಾನ ಕಲಾಕೇಂದ್ರದ ಮುಖ್ಯಸ್ಥ ರಾಜಶೇಖರ್ ಹೆಬ್ಬಾರ್, ಯಕ್ಷಗಾನ ಕಲಾಕೇಂದ್ರದಲ್ಲಿ ನಿರಂತರ ಯಕ್ಷ ಶಿಕ್ಷಣ ನೀಡಲು ನಿರಖು ಠೇವಣಿಯಿಡುವ ಯೋಜನೆಗೆ ನಾವು ಮುಂದಾಗಿದ್ದೇವೆ. ಅಲ್ಲದೆ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಯಕ್ಷಗಾನ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸನ್ನು ನಡೆಸಲು ಅವಕಾಶ ನೀಡಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.