ಕೊಟ್ಟೂರು: ನಮ್ಮ ಭಾಗದಲ್ಲಿ ಬಯಲಾಟ, ದೊಡ್ಡಾಟಗಳು ಹೇಗೆಯೋ ಹಾಗೇ ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ಗಂಡು ಕಲೆಯಾಗಿದೆ ಎಂದು ಶ್ರೀ ಕೊಟ್ಟೂರೇಶ್ವರ ಕಲಾ ರಂಗದ ಅಧ್ಯಕ್ಷ ಎಂ.ಎಸ್. ಶಿವನಗುತ್ತಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದ ಕಲಾರಂಗ ಸಹಯೋಗದಲ್ಲಿ ಸುರೇಶ ಶೆಟ್ಟಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಭಾಗದಲ್ಲಿನ ಜನರು ನಾಟಕ ಹಾಗೂ ಬಯಲಾಟಗಳನ್ನು ವೀಕ್ಷಿಸಿದ್ದಾರೆ. ಕರಾವಳಿ ಪ್ರದೇಶದ ಯಕ್ಷಗಾನ ನಮ್ಮ ಭಾಗದಲ್ಲಿ ಪ್ರದರ್ಶನವಾಗುವುದು ಅಪರೂಪ. ಇಂತಹ ಸಂದರ್ಭದಲ್ಲಿ ಹೋಟಲ್ ಮಾಲೀಕ ಸುರೇಶ್ ಶೆಟ್ಟಿ ಕಾರ್ಯಕ್ರಮ ಆಯೋಜಿಸುವ ಮೂಲಕ ಎಲ್ಲರಿಗೂ ಯಕ್ಷಗಾನ ಪ್ರದರ್ಶನದ ಸವಿ ನೀಡಿದ್ದಾರೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ಕೇವಲ ಪುರಷರೇ ನಾನಾ ಪಾತ್ರಗಳ ವೇಷಗಳನ್ನು ಹಾಕಿ, ಸಾಂಪ್ರಾದಾಯಿಕವಾಗಿ ಹೆಜ್ಜೆಗಳನ್ನು ಹಾಕುತ್ತ ಸಂಭಾಷಣೆಗಳನ್ನು ಹೇಳುವ ಯಕ್ಷಗಾನ ಕಲೆ ನಿಜಕ್ಕೂ ಅತ್ಯದ್ಭುತ. ಕರಾವಳಿ ಬಹು ಮುಖ್ಯ ಕಲೆಯಾಗಿರುವ ಯಕ್ಷಗಾನದಲ್ಲಿ ಅನೇಕರು ಪಾತ್ರ ವಹಿಸುತ್ತಾರೆ. ನಮ್ಮ ಭಾಗದಲ್ಲಿ ಅಪರೂಪವಾಗಿರುವ ಯಕ್ಷಗಾನ ಕಲೆ ಆಯೋಜನೆಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಪ್ರತಿ ವರ್ಷವೂ ನಮ್ಮಲ್ಲಿ ಯಕ್ಷಗಾನ ಪ್ರದರ್ಶನವಾಗಲಿ ಎಂದು ಹೇಳಿದರು.ಯುವ ಮುಖಂಡ ಗೋಪಿ ಬಲಿಜ ಉದ್ಘಾಟಿಸಿದರು. ವರ್ತಕ ಬಿ.ಎಸ್. ಕೊಟ್ರೇಶ್, ಆಯೋಜಕ ಮಯೂರು ಹೋಟೆಲ್ ಮಾಲೀಕ ಸುರೇಶ್ ಶೆಟ್ಟಿ, ಯಕ್ಷಗಾನ ತಂಡದ ಕೋಡಿ ವಿಶ್ವನಾಥ ಗಾಣಿಗ, ಜೆ. ರಾಘವೇಂದ್ರ ಮಯ್ಯ ಇದ್ದರು.ಅರವಿಂದ ಬಸಾಪುರ ನಿರ್ವಹಿಸಿದರು.ಮನೆ ಸೆಳೆದ ಯಕ್ಷಗಾನ: ಕುಂದಾಪುರ ತಾಲೂಕಿನ ಹಾಲಾಡಿ ಶ್ರೀ ಮಹಾ ಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಕಾರ್ತಿಕ್ ರಾವ್ ಪಾಂಡೇಶ್ವರ ವಿರಚಿತದ ಮಹಾಶಕ್ತಿ ಮಹಾಕಾಳಿ ಯಕ್ಷಗಾನ ಪ್ರದರ್ಶನಗೊಂಡಿತು. ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಕಿರುಕುಳಗಳ ಹಿನ್ನೆಲೆಯನ್ನು ಇರಿಸಿಕೊಂಡು ಕಾಲ್ಪನಿಕವಾಗಿ ಪೌರಾಣಿಕ ಪಾತ್ರಗಳನ್ನು ಸೃಷ್ಟಿಸಿ, ಹೆಣ್ಣನ್ನು ರಕ್ಷಿಸಲು ಮಹಾಕಾಳಿ ಅವತಾರ ಎತ್ತಿ ಬರುವುದು, ಅಂಧಕಾಸುರ ರಾಕ್ಷಸ ಸಂಹಾರಕ್ಕಾಗಿ ಕಾಳಿಯು, ನಾಗದೈವ, ಹರ ದೈವವನ್ನು ಮೈಗೂಡಿಸಿಕೊಂಡು ಹತ ಮಾಡುವುದು ಕಥೆಯ ಸಾರಾಂಶ. ಎಲ್ಲ ಪಾತ್ರಧಾರಿಗಳ ಕುಣಿತ, ಭಾಗವತರ ಹಾಡುಗಾರಿಕೆ, ಸಂಭಾಷಣೆ ಹಾಗೂ ಅಂತ್ಯದಲ್ಲಿ ಸಂಹಾರದ ಸನ್ನಿವೇಶ ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸಿದರು.
ರಾಘವೇಂದ್ರಮಯ್ಯ ಹಾಲಾಡಿ, ಉಮೇಶ್ ಮರಾಠೆ ಭಾಗವತರಾಗಿ, ರಮೇಶ್ ಭಂಡಾರಿ ಮದ್ದಳೆ, ಸುಬ್ರಹ್ಮಣ್ಯ ಮೂರುರು ಚಂಡೆ ವಾದಕರಾಗಿದ್ದ ಪ್ರಸಂಗದಲ್ಲಿ ವಿಶ್ವನಾಥ ಗಾಣಿಗ, ಹರೀಶ, ಉಳ್ಳೂರು ನಾರಾಯಣ, ನಾಗಚಂದ್ರ ಮಾಧವ, ರವೀಂದ್ರ, ಕುಮಾರ ಅರಳಿಸುರಳಿ, ಸತೀಶನಾಯ್ಕ, ಕಾರ್ತಿಕ್ ರಾವ್, ಚಂದ್ರಹಾಸ, ರಾಜೇಶ್, ಯವರಾಜ, ಸಂದೀಪ್ ಪಾತ್ರಗಳನ್ನು ನಿರ್ವಹಿಸಿದರು.