ಯಕ್ಷಗಾನಕ್ಕೆ ಸಿಗುತ್ತಿರುವ ಪ್ರೋತ್ಸಾಹ ಕಂಡು ಆನಂದವಾಗುತ್ತಿದೆ. ಕದ್ರಿ ಯಕ್ಷ ಬಳಗದಂತಹ ಸಂಘಟನೆಗಳು, ವಿನೂತನ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ಈ ಕಲೆಯ ಔನತ್ಯವನ್ನು ಹೆಚ್ಚಿಸಿವೆ. ಯಕ್ಷಗಾನಕ್ಕೆ ಕರ್ನಾಟಕ ರಾಜ್ಯ ಕಲೆಯಾಗಿ ಘೋಷಿಸಲು ಇದು ಸೂಕ್ತ ಸಮಯ. ಈ ಬಗ್ಗೆ ಸರ್ಕಾರದ ಗಮನಸೆಳೆಯಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕರೆ ನೀಡಿದ್ದಾರೆ.

ಮಂಗಳೂರು: ಯಕ್ಷಗಾನಕ್ಕೆ ಸಿಗುತ್ತಿರುವ ಪ್ರೋತ್ಸಾಹ ಕಂಡು ಆನಂದವಾಗುತ್ತಿದೆ. ಕದ್ರಿ ಯಕ್ಷ ಬಳಗದಂತಹ ಸಂಘಟನೆಗಳು, ವಿನೂತನ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ಈ ಕಲೆಯ ಔನತ್ಯವನ್ನು ಹೆಚ್ಚಿಸಿವೆ. ಯಕ್ಷಗಾನಕ್ಕೆ ಕರ್ನಾಟಕ ರಾಜ್ಯ ಕಲೆಯಾಗಿ ಘೋಷಿಸಲು ಇದು ಸೂಕ್ತ ಸಮಯ. ಈ ಬಗ್ಗೆ ಸರ್ಕಾರದ ಗಮನಸೆಳೆಯಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕರೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಅಕಾಡೆಮಿಗಳ ಸಹಯೋಗದಲ್ಲಿ ಮಂಗಳೂರಿನ ಕದ್ರಿ ಯಕ್ಷಬಳಗದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಹಮ್ಮಿಕೊಂಡ ಪ್ರಸಂಗ ಪರಾಮರ್ಶೆ - ಹಿರಿಯರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಿ ೩ ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಸಿಗುವ ಅನುದಾನವನ್ನು ಕಲೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಆತ್ಮತೃಪ್ತಿ ನನಗಿದೆ ಎಂದ ಅವರು, ಇಂದು ಬಹುದೊಡ್ಡ ಸಂಖ್ಯೆಯಲ್ಲಿ ಹೆಣ್ಮಕ್ಕಳು, ಮಹಿಳೆಯರು ಕೂಡಾ ಯಕ್ಷಗಾನ ಕಲಿಯುವುದನ್ನು ಕಾಣುತ್ತಿದ್ದೇವೆ. ಇದರಿಂದ ಸುಸಂಸ್ಕೃತ, ನೈತಿಕ ಸಮಾಜವನ್ನು ಕಟ್ಟುವ ಕನಸು ನನಸಾಗುತ್ತಿದೆ. ಯಕ್ಷಗಾನ ಕಲಿತ ಮಕ್ಕಳು, ಮಹಿಳೆಯರು ಕಲೆಯ ಪ್ರೇರಣೆಯಿಂದ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜವನ್ನು ಮುನ್ನಡೆಸುತ್ತಾರೆ ಎಂದರು.

ಅನಾರೋಗ್ಯದಿಂದಾಗಿ ಬೆಂಗಳೂರಿನ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿರಿಯ ಯಕ್ಷಗಾನ ಕಲಾವಿದ ಪದ್ಮನಾಭ ಉಪಾಧ್ಯಾಯಗೆ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕದ್ರಿ ಯಕ್ಷಗಾನ ಬಳಗದಿಂದ ಹಿರಿಯ ಅರ್ಥಧಾರಿ ಕದ್ರಿ ಕಂಬಳಗುತ್ತು ದಿ.ಬಾಲಕೃಷ್ಣ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಯನ್ನು ಪಾವಂಜೆ ಮೇಳದ ಹಾಸ್ಯಗಾರ ಸಂದೇಶ ಮಂದಾರರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶ್ರೀ ಕ್ಷೇತ್ರ ಕದ್ರಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಕರ್ನೂರು ಮೋಹನ್ ರೈ, ಕದ್ರಿ ಯಕ್ಷ ಬಳಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕ ಮೋಹನ ಕೊಪ್ಪಲಕದ್ರಿ ಹಾಗೂ ಅಕಾಡೆಮಿಯ ಸದಸ್ಯರಾದ ವಿನಯ ಕುಮಾರ್ ಶೆಟ್ಟಿ, ಗುರುಪ್ರಸಾದ್ ಭಟ್, ರಾಜೇಶ್ ಕುಳಾಯಿ ಉಪಸ್ಥಿತರಿದ್ದರು. ಕದ್ರಿ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.