ಯಕ್ಷಗಾನದಲ್ಲಿ ಹಲವು ಪರಂಪರೆಗಳಿದ್ದು ಪಠ್ಯಕ್ರಮ ಒಂದು ಮಾರ್ಗರೂಪಣೆಯೇ ಹೊರತು ಶೈಲಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಲಾರದು. ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಶೈಕ್ಷಣಿಕ ಆವರಣಕ್ಕೆ ಬರುತ್ತಿರುವುದನ್ನು ನಾವು ಸ್ವಾಗತಿಸಬೇಕು ಎಂದು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಉಳ್ಳಾಲ: ಯಕ್ಷಗಾನದಲ್ಲಿ ಹಲವು ಪರಂಪರೆಗಳಿದ್ದು ಪಠ್ಯಕ್ರಮ ಒಂದು ಮಾರ್ಗರೂಪಣೆಯೇ ಹೊರತು ಶೈಲಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಲಾರದು. ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಶೈಕ್ಷಣಿಕ ಆವರಣಕ್ಕೆ ಬರುತ್ತಿರುವುದನ್ನು ನಾವು ಸ್ವಾಗತಿಸಬೇಕು ಎಂದು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಯಕ್ಷಗಾನ ಪಠ್ಯ ರೂಪಿಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ಶ್ರೀಮಂತ ಹಾಗೂ ಆರಾಧನಾ ಕಲೆಯಾಗಿ ಗುರುತಿಸಿಕೊಂಡಿರುವ ಯಕ್ಷಗಾನವು ವಿಶ್ವವಿದ್ಯಾಲಯದ ಮೂಲಕ ಶೈಕ್ಷಣಿಕವಾಗಿ ಗುರುತಿಸಿಕೊಂಡರೆ ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆಯಲು ಸಾಧ್ಯ. ಈ ಕಲೆಯನ್ನು ಸಂಪ್ರದಾಯ ಬದ್ಧವಾಗಿ ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ ಹಾಗೂ ಯಕ್ಷಗಾನದ ಉನ್ನತೀಕರಣಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಯಕ್ಷಗಾನದಲ್ಲಿ ಯಾವುದೇ ಹೊಸ ಪ್ರಯೋಗಗಳು ನಡೆದರೂ ಅದರ ಮೂಲಭೂತ ಮೌಲ್ಯಗಳಿಗೆ ಧಕ್ಕೆಯಾಗಬಾರದು. ಮೌಲ್ಯಗಳೇ ನಮ್ಮ ಪರಂಪರೆಯ ಬದುಕಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಮಂಗಳೂರು ವಿವಿಯಲ್ಲಿ ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ವಿಶೇಷ ಪರೀಕ್ಷೆಯ ಮೂಲಕ ಶೈಕ್ಷಣಿಕ ಆಯಾಮ ಒದಗಿ ಬರುತ್ತಿರುವುದು ಬಹಳ ಮಹತ್ವದ ಸಂಗತಿ ಎಂದರು.ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಬಯಲು ವಿಶ್ವವಿದ್ಯಾಲಯದಿಂದ ಬಂದಿರುವ ಯಕ್ಷಗಾನವು ಮಂಗಳೂರು ವಿಶ್ವವಿದ್ಯಾಲಯದ ಮೂಲಕ ಶೈಕ್ಷಣಿಕ ಆಯಾಮವನ್ನು ಪಡೆದುಕೊಳ್ಳುತ್ತಿರುವುದು ಮಹತ್ವದ ವಿಷಯವಾಗಿದೆ. ಯಕ್ಷಗಾನದ ವಿವಿಧ ಶಿಕ್ಷಣ ಮಾದರಿಗಳ ಸೂಕ್ಷ್ಮಗಳನ್ನು ಗಮನಿಸಿ ನೂತನ ಪಠ್ಯ ರಚನೆಯನ್ನು ಮಾಡಿಕೊಳ್ಳಲಾಗುವುದು ಎಂದರು.
ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ.ಎಂ.ಎಲ್.ಸಾಮಗ ಯಕ್ಷಗಾನ ತಜ್ಞರಾದ ಪದ್ಮನಾಭ ಉಪಾಧ್ಯಾಯ, ಗುಂಡ್ಮಿ ಸದಾನಂದ ಐತಾಳ, ಎ.ಪಿ ಪಾಠಕ್, ಪ್ರಕಾಶ್ ಮೂಡಿತ್ತಾಯ, ಪಣಂಬೂರು ವಾಸುದೇವ ಐತಾಳ, ಸುಜಯೀಂದ್ರ ಹಂದೆ, ಎನ್ ಜಿ ಹೆಗಡೆ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ರಾಜಾರಾಮ ಹೊಳ್ಳ ಕೈರಂಗಳ, ಕೃಷ್ಣಪ್ರಕಾಶ ಉಳಿತ್ತಾಯ, ಕೌಶಿಕ್ ರಾವ್ ಪುತ್ತಿಗೆ, ಮಯೂರ ನಾಯ್ಗ, ಶೈಲೇಶ್ ತೀರ್ಥಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.ಯಕ್ಷಗಾನ ಗುರುಗಳಾದ ದೀವಿತ್ ಕೋಟ್ಯಾನ್ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಸಾಯಿಸುಮ ನಾವಡ ನಿರೂಪಿಸಿದರು.