ಸಾರಾಂಶ
ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದ ಬಳಿ ಇರುವ ಕರುವಿನಗುಡ್ಡದಲ್ಲಿ ಅಕ್ರಮವಾಗಿ ಭೂಮಿಯನ್ನು ಜೆಸಿಬಿ ಯಂತ್ರದ ಮೂಲಕ ಬಗೆದು ಮಣ್ಣನ್ನು ಲೂಟಿ ಮಾಡಿ, ಈ ಭೂಮಿಯನ್ನು ಹದಮಾಡಿರುವ ಮೂವರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ ತಹಸೀಲ್ದಾರ್‌ಗೆ ದೂರು ಸಲ್ಲಿಸಿದರು.
ತಹಸೀಲ್ದಾರ್‌ಗೆ ದೂರು । ಅಕ್ರಮ ಭೂಮಿ ಅಗೆತ ಆರೋಪ
ಯಳಂದೂರು: ತಾಲೂಕಿನ ಮಲಾರಪಾಳ್ಯ ಗ್ರಾಮದ ಬಳಿ ಇರುವ ಕರುವಿನಗುಡ್ಡದಲ್ಲಿ ಅಕ್ರಮವಾಗಿ ಭೂಮಿಯನ್ನು ಜೆಸಿಬಿ ಯಂತ್ರದ ಮೂಲಕ ಬಗೆದು ಮಣ್ಣನ್ನು ಲೂಟಿ ಮಾಡಿ, ಈ ಭೂಮಿಯನ್ನು ಹದಮಾಡಿರುವ ಮೂವರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ ತಹಸೀಲ್ದಾರ್‌ಗೆ ದೂರು ಸಲ್ಲಿಸಿದರು.ಮಾಂಬಳ್ಳಿ ಗ್ರಾಮದ ಮಹದೇವ, ಯರಿಯೂರಿನ ಸಿ. ರಾಜಣ್ಣ, ಆಲ್ಕೆರೆ ಅಗ್ರಹಾರ ಗ್ರಾಮದ ರಂಗಸ್ವಾಮಿ ಎಂಬುವರು ಇಲ್ಲಿನ ಸರ್ವೇ ನಂ. ೯೭ ರಲ್ಲಿರುವ ಸರ್ಕಾರಿ ಕರುವಿನ ಗುಡ್ಡದ ೪೯.೨೮ ಎಕರೆ ಜಮೀನಿನಲ್ಲಿ ೫ ಎಕರೆಗೂ ಹೆಚ್ಚು ಜಮೀನನ್ನು ಕಳೆದ ನಾಲ್ಕು ದಿನಗಳ ಹಿಂದೆ ಜೆಸಿಬಿ ಯಂತ್ರಗಳ ಮೂಲಕ ಇಲ್ಲಿದ್ದ ಗುಡ್ಡವನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣನ್ನು ತೆಗೆದು ಉಳುಮೆಯನ್ನು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಗುಡ್ಡ ಆನಾದಿ ಕಾಲದಿಂದಲೂ ಗೌಡಹಳ್ಳಿ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ ಸೇರಿದಂತೆ ಹಲವರು ಗ್ರಾಮದ ಹೈನುಗಾರರು, ಕುರಿ, ಮೇಕೆ ಸಾಕುದಾರರು ತಮ್ಮ ಜಾನುವಾರನ್ನು ಮೇಯಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಸ್ಥಳಕ್ಕೆ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಮದೇಶ್ ಭೇಟಿ ನೀಡಿ, ಮಾತನಾಡಿ, ಇದು ಸರ್ಕಾರಿ ಆಸ್ತಿಯಾಗಿದ್ದು ಇಲ್ಲಿಗೆ ಅನಧಿಕೃತವಾಗಿ ಯಾರೂ ಪ್ರವೇಶಿಸುವಂತಿಲ್ಲ. ಗ್ರಾಮಸ್ಥರು ಮೂರು ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದು ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ರಜಸ್ವ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಶರತ್ ನಂದಾ, ಪ್ರವೀಣ್ ಗ್ರಾಮದ ಮುಖಂಡರಾದ ಆರ್. ಪುಟ್ಟಬಸವಯ್ಯ, ಶಿವನಂಜಯ್ಯ, ಶಿವರುದ್ರಪ್ಪ, ಎಸ್.ಪುಟ್ಟಸ್ವಾಮಿ, ಎನ್.ನಿಂಗರಾಜು ರೇಚಣ್ಣ, ಎಸ್.ಸತೀಶ್, ಶಿವನಂಜ. ಆರ್.ಕುಮಾರ, ನಂಜಯ್ಯ, ಎನ್. ಮಲ್ಲು, ಬಂಗಾರನಾಯಕ, ಸೋಮಣ್ಣ, ಆರ್.ರಂಗಯ್ಯ ಆರ್.ರಾಜೇಶ್, ನೀಲಯ್ಯ, ಶಿವರುದ್ರಪ್ಪ, ಬಸವಣ್ಣ ಸತೀಶ್ ಹಾಜರಿದ್ದರು.