ಸಾರಾಂಶ
ಕೊಪ್ಪಳ: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದ ನಿವಾಸಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ ನಾಯಕ ಸೇರಿದಂತೆ 9 ಆರೋಪಿಗಳು ಖುಲಾಸೆಯಾಗಿದ್ದಾರೆ.
ಹತ್ತು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಈ ಮಹತ್ವದ ತೀರ್ಪುನ್ನು ಶುಕ್ರವಾರ ಪ್ರಕಟಿಸಿದ್ದಾರೆ. ಇದರಿಂದ ಹನುಮೇಶ ನಾಯಕ ಸೇರಿದಂತೆ ಎಲ್ಲ ಆರೋಪಿಗಳು ಕೊಲೆ ಆರೋಪದಿಂದ ಮುಕ್ತರಾಗಿದ್ದಾರೆ.ಏನಿದು ಪ್ರಕರಣ?: ಕೊಪ್ಪಳ ನಗರದ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೆ ಹಳಿಯಲ್ಲಿ ವಿದ್ಯಾರ್ಥಿ ಯಲ್ಲಾಲಿಂಗ ಮೃತದೇಹ 2015 ಜನೇವರಿ 11ರಂದು ಪತ್ತೆಯಾಗಿತ್ತು. ಇದು ಕೊಲೆಯಾಗಿದ್ದು, ಹನುಮೇಶ ನಾಯಕ, ಮಹಾಂತೇಶ ನಾಯಕ, ಮನೋಜ ಪಾಟೀಲ್, ಬಾಳನಗೌಡ, ಕಾಡ ಮಂಜು, ನಂದೀಶ, ಪರಶುರಾಮ ಹಾಗೂ ಯಮನೂರಪ್ಪ ಸೇರಿದಂತೆ 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲಾಯಿತು. ನಂತರ ಮೂರು ವರ್ಷಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಹತ್ತು ವರ್ಷಗಳ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ ಇದೊಂದು ಆತ್ಮಹತ್ಯೆ ಪ್ರಕರಣವಾಗಿದೆ ಎಂದು ತೀರ್ಪು ನೀಡಿದೆ.
ಯಾಕೆ ಆರೋಪ?: ವಿದ್ಯಾರ್ಥಿ ಯಲ್ಲಾಲಿಂಗ ಹುಲಿಹೈದರ ಗ್ರಾಪಂನಲ್ಲಿ ನಡೆದ ಅಕ್ರಮದ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರು. ಈ ಕಾರಣಕ್ಕಾಗಿಯೇ ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.ಸಚಿವ ಸ್ಥಾನಕ್ಕೆ ಕುತ್ತು: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ ನಾಯಕ ಮುಖ್ಯ ಆರೋಪಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಿಂದ ಶಿವರಾಜ ತಂಗಡಗಿ ಅವರು ಸಚಿವ ಸ್ಥಾನ ಕಳೆದುಕೊಳ್ಳವಂತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ತೀರ್ಪು ಕುರಿತು ವಕೀಲ ಗಂಗಾಧರ ಮಾಹಿತಿ ನೀಡಿ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಪು ನೀಡಿದ್ದಾರೆ. ಹೀಗಾಗಿ ಇದರಲ್ಲಿ ಕೊಲೆ ಮಾಡಿದ ಆರೋಪಿಗಳು ಆರೋಪದಿಂದ ಬಿಡುಗಡೆಗೊಳಿಸಿ ನ್ಯಾಯಾಲಯದ ತೀರ್ಪು ನೀಡಿದೆ ಎಂದು ಹೇಳಿದರು.ಪ್ರಕರಣ ಸುದೀರ್ಘ ವಿಚಾರಣೆ ನಡೆಸಿ ಪ್ರಕರಣದಲ್ಲಿ ಹನುಮೇಶ ನಾಯಕ ಕುಟುಂಬದ ಪಾತ್ರ ಇಲ್ಲ ಎನ್ನುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ.
ಇದೊಂದು ರಾಜಕೀಯ ಪಿತೂರಿಯಾಗಿದೆ. ರಾಜಕೀಯ ಷಡ್ಯಂತ್ರದಿಂದ ಹನುಮೇಶ ನಾಯಕ ಕುಟುಂಬ ಹತ್ತು ವರ್ಷಗಳ ನೋವು ಅನುಭವಿಸುವಂತಾಯಿತು ಎಂದಿದ್ದಾರೆ.ಇಡೀ ಕುಟುಂಬಕ್ಕೆ ನೋವು ಕೊಟ್ಟಿದ್ದಾರೆ. ನಾವು ಇದರಲ್ಲಿ ತಪ್ಪು ಮಾಡದಿದ್ದರೂ ಹತ್ತು ವರ್ಷ ನೋವು ಅನುಭವಿಸುವಂತಾಯಿತು. ತಪ್ಪು ಮಾಡಿದ್ದರೆ ನಾವು ಸರ್ವನಾಶವಾಗಲಿ, ಇಲ್ಲದಿದ್ದರೆ ಅವರು ಸರ್ವನಾಶವಾಗಲಿ ಆ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಎಂದು ಖುಲಾಸೆಯಾಗಿರುವ ಆರೋಪಿ ಹನುಮೇಶ ನಾಯಕ ಹೇಳಿದರು.