ಸಾರಾಂಶ
ಯಲ್ಲಮ್ಮದೇವಿ ಜಾತ್ರೆಗೆ ವಿವಿಧೆಡೆಯಿಂದ ಆಗಮಿಸಿ ಹರಕೆ ತೀರಿಸಿದ ಭಕ್ತರು. ಜಾತ್ರೆ ನಿಮಿತ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು, ವಿಜೇತರಾಗಿ ಹುಣಸಗಿ ತಾಲೂಕಿನ ಕುಸ್ತಿಪಟು ಅನಿಲ್ ಕುಮಾರ್ ಜಯಿಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಸಗರನಾಡಿನ ಆರಾಧ್ಯ ದೈವವಾಗಿರುವ ತಾಲೂಕಿನ ಸಗರ ಗ್ರಾಮದ ಯಲ್ಲಮ್ಮ ದೇವಿ ಜಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ, ಭಕ್ತಿಯಿಂದ ಜರುಗಿತು.ತಾಲೂಕಿನ ವಿವಿಧ ಗ್ರಾಮಗಳು ಸೇರಿ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಕುಟುಂಬ ಸಮೇತ ಜಾತ್ರೆಯಲ್ಲಿ ಪಾಲ್ಗೊಂಡು ತಾಯಿಯ ಹರಕೆ ತೀರಿಸಿ ಆರ್ಶಿವಾದ ಪಡೆದು ಪುನೀತರಾದರು.
ಭಕ್ತರು ಹರಿಕೆ ತೀರಿಸಲು ಅರೆ ಬೆತ್ತಲೆ ಮೆರವಣಿಗೆ ನಿಷೇಧಿಸಿದ್ದರಿಂದ ಭಕ್ತರು ಮೈತುಂಬಾ ಬಟ್ಟೆಯೊಂದಿಗೆ ಸೊಪ್ಪು ಸುತ್ತಿಕೊಂಡು ತಲೆಯ ಮೇಲೆ ಆರತಿ ಹೊತ್ತುಕೊಂಡು ಹರಿಕೆ ತೀರಿಸಿದರು.ಪಲ್ಲಕ್ಕಿ ಮೆರವಣಿಗೆ:
ಎರಡು ದಿನಗಳ ಕಾಲ ಈ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಜಾತ್ರೆ ಹಿನ್ನೆಲೆ ಗ್ರಾಮದ ಅರ್ಚಕರಾದ ಬಸ್ಸಪ್ಪ ಚಂದಪ್ಪ ಸಿಂಪಿ ಅವರ ಮನೆಯಲ್ಲಿರುವ ಯಲ್ಲಮ್ಮ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿಯು ಫೆ.19 ರಂದು ಬೆ.10.30ಕ್ಕೆ ಬಾಜಾ-ಭಜಂತ್ರಿಗಳೊಂದಿಗೆ ಊರಿನ ಪ್ರಮುಖ ಬೀದಿಗಳಿಂದ ಶಾರದಹಳ್ಳಿ, ಬಿಜಾಸ್ಪೂರ, ಯಮನೂರ ಮಾರ್ಗವಾಗಿ ಈ ಭಾಗದ ಪವಿತ್ರ ನದಿಯಾಗಿರುವ ಕೃಷ್ಣಾ ನದಿಗೆ ಗಂಗಾಸ್ನಾನಕ್ಕೆ ಹೋಗುತ್ತದೆ. ಅಲ್ಲಿ ಗಂಗಾಸ್ನಾನ ಮುಗಿಸಿಕೊಂಡು ಅಂದೇ ರಾತ್ರಿ ಕೃಷ್ಣಾ ನದಿಯಿಂದ ಹೊರಟು ಯಮನೂರು, ಲಕ್ಷ್ಮಿಪುರ, ರಂಗಂಪೇಠ, ರತ್ತಾಳ ಮಾರ್ಗವಾಗಿ ಮೆರವಣಿಗೆಯ ಮೂಲಕ ಫೆ.20 ರಂದು ಸಂಜೆ 5ಕ್ಕೆ ಯಲ್ಲಮ್ಮ ದೇವಿಯ ಪಲ್ಲಕ್ಕಿಯು ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ತಲುಪುತ್ತದೆ.ಜಾತ್ರೆಯಲ್ಲಿ ಜೋಕಾಲಿ, ಪಳಾರ್ ಅಂಗಡಿ, ಜಿಲೇಬಿ-ಬಜಿ ದುಃಖಾನ, ಕಬ್ಬಿನ ಹಾಲು, ಚಹಾದ ಅಂಗಡಿ ಸೇರಿ ವಿವಿಧ ಬಗೆಯ ಮಿಠಾಯಿ ಅಂಗಡಿಗಳು, ಆಟಿಕೆ ಸಾಮಾನುಗಳ ಅಂಗಡಿಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. ಜಾತ್ರೆಗೆ ಆಗಮಿಸಿದ್ದ ಮಹಿಳೆಯರು ಮುತ್ತೈದೆಯರ ಸಂಕೇತವಾದ ಕೈ ಬಳೆ ತೋಡಿಸಿಕೊಂಡರು. ಬಹುತೇಕ ಬಳೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.
ಜಾತ್ರೆಯಲ್ಲಿ ಗ್ರಾಮದ ಮುಖಂಡರು, ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ತಾಲೂಕು, ಜಿಲ್ಲೆಗಳಿಂದ ಭಕ್ತರು ಇದ್ದರು.ಮನಸೆಳೆದ ಜಗಜಟ್ಟಿಗಳ ಕಾಳಗ
ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪಂದ್ಯಾವಳಿಗೆ ಸುತ್ತಲಿನ ಪೈಲ್ವಾನರು ಸೇರಿ ವಿವಿಧ ರಾಜ್ಯ, ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಕುಸ್ತಿಪಟುಗಳ ಕಾಳಗ ನೆರದಿದ್ದ ಜನರನ್ನು ರೋಮಾಂಚನಗೊಳಿಸಿತು. ಪಂದ್ಯದಲ್ಲಿ ಗೆದ್ದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ಅಂತಿಮವಾಗಿ ತಾಲೂಕಿನ ದೋರನಹಳ್ಳಿ ಗ್ರಾಮದ ಕುಸ್ತಿಪಟು ಅಶೋಕ ಅವರನ್ನು ಹುಣಸಗಿ ತಾಲೂಕಿನ ಅನಿಲ್ ಕುಮಾರ್ ಅವರು ಸೋಲಿಸಿದರು. ವಿಜೇತರಾದ ಕುಸ್ತಿಪಟು ಅನಿಲ್ ಕುಮಾರ್ ಅವರಿಗೆ ಕುಸ್ತಿಪಟುಗೆ 5 ತೊಲಿ ಬೆಳ್ಳಿ ಕಡಗ, 2500 ರು. ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.