ಸಾರಾಂಶ
ಯಲ್ಲಾಪುರ:
ಇಲ್ಲಿನ ಪಟ್ಟಣ ಪಂಚಾಯಿತಿ 2024-25ನೇ ಸಾಲಿನ ₹ 7.55 ಲಕ್ಷ ಉಳಿತಾಯ ಬಜೆಟ್‌ನ್ನು ಗುರುವಾರ ಮಂಡಿಸಿದೆ.ಆಯ-ವ್ಯಯಗಳ ಕುರಿತಂತೆ ನಡೆದ ಸಭೆಯಲ್ಲಿ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ಎಂ.ಗುರುರಾಜ ಉಪಸ್ಥಿತಿಯಲ್ಲಿ ಮುಖ್ಯಾಧಿಕಾರಿ ಸುನೀಲ್ ಗಾವಡೆ ಅನುಪಸ್ಥಿತಿಯಲ್ಲಿ ಪಪಂನ ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ಟ ಬಜೆಟ್ ಮಂಡಿಸಿದರು.ನಗದು ಮತ್ತು ಬ್ಯಾಂಕ್ ಶಿಲ್ಕುಗಳಲ್ಲಿ ₹ ೧೧,೪೪,೭೮,೪೫೮ ಕೋಟಿ ಹೊಂದಲಾಗಿದ್ದು, ರಾಜಸ್ವ ಖಾತೆಯ ಸ್ವೀಕೃತಿಯಲ್ಲಿ ₹ ೭,೫೬,೩೧,೧೪೧ ಮತ್ತು ರಾಜಸ್ವ ಪಾವತಿಗಳಲ್ಲಿ ₹ ೭,೩೪,೫೪,೧೪೧ ಲೆಕ್ಕ ಮಂಡಿಸಲಾಯಿತು. ಅಲ್ಲದೇ ರಾಜಸ್ವ ಖಾತೆಯಲ್ಲಿ ಹೆಚ್ಚುವರಿಯಾಗಿ ₹ ೨೧,೭೭,೦೦೦ ಗಳಿವೆಯೆಂದು ಮಾಹಿತಿ ನೀಡಲಾಯಿತು. ಬಂಡವಾಳ ಖಾತೆಯ ಸ್ವೀಕೃತಿಯಲ್ಲಿ ₹ ೬.೯೬ ಕೋಟಿ ಮತ್ತು ಪಾವತಿಗಳಲ್ಲಿ ₹ ೧೮.೫೫ ಕೋಟಿ ಲೆಕ್ಕ ಮಂಡಿಸಲಾಯಿತು. ಬಂಡವಾಳ ಖಾತೆಯಲ್ಲಿ ಹೆಚ್ಚುವರಿಯಾಗಿ ₹ ೧೧.೫೯ ಕೋಟಿ ಇದೆಯೆಂಬ ಮಾಹಿತಿ ನೀಡಲಾಯಿತು. ಅಲ್ಲದೇ ಅಸಾಧಾರಣ ಸ್ವೀಕೃತಿಗಳಲ್ಲಿ ₹ ೨,೨೯,೬೩,೫೬೦ ಮತ್ತು ಅಸಾಧಾರಣ ಪಾವತಿಗಳಲ್ಲಿ ₹ ೨,೨೯,೬೩,೫೬೦ ಇದೆ ಎಂದು ಸಭೆಗೆ ತಿಳಿಸಲಾಯಿತು. ಒಟ್ಟೂ ಮುಂಬರುವ ವರ್ಷದ ಆಯ-ವ್ಯಯದ ಒಟ್ಟೂ ಹೆಚ್ಚುವರಿ ಹಣವೆಂದು ₹ ೧೧,೩೭ ಲಕ್ಷವೆಂದು ತಿಳಿಸಲಾಯಿತು.ಇದಕ್ಕೂ ಮುನ್ನ ನಡೆದ ಆಯವ್ಯಯ ಮಂಡನೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಸದಸ್ಯ ಸತೀಶ ನಾಯ್ಕ, ಕಳೆದ ಯಲ್ಲಾಪುರ ಜಾತ್ರೆಗಾಗಿ ವ್ಯಯಿಸಿದ್ದ ₹ ೩೦ ಲಕ್ಷದ ಲೆಕ್ಕವನ್ನು ಈ ವರೆಗೂ ಅಧಿಕಾರಿಗಳು ನೀಡಿಲ್ಲ. ಅಲ್ಲದೇ ಪ್ರತಿ ತಿಂಗಳು ಖರ್ಚು ಮಾಡುವ ಹಣಕಾಸು ಬಗೆಗಿನ ಲೆಕ್ಕವನ್ನೂ ನೀಡುತ್ತಿಲ್ಲವೆಂದರೆ ಇಂದಿನ ಸಭೆಗೆ ಯಾವ ಅರ್ಥವಿದೆ ಎಂದು ಪ್ರಶ್ನಿಸಿದರು. ಆಗ ತಹಸೀಲ್ದಾರ್ ಎಂ. ಗುರುರಾಜ, ಎಲ್ಲ ಸಂದರ್ಭಗಳಲ್ಲಿಯೂ ಕೇವಲ ಪ್ರಶ್ನೆಗಳಿಂದಲೇ ಸಮಸ್ಯೆ ಬಗೆಹರಿಯುವುದಿಲ್ಲ. ಸದಸ್ಯರು ತಾಂತ್ರಿಕ ಅಂಶ ಅರ್ಥಮಾಡಿಕೊಳ್ಳಬೇಕು ಎಂದು ಸಮಜಾಯಿಷಿ ನೀಡಿದರು.ಸದಸ್ಯ ರಾಧಾಕೃಷ್ಣ ನಾಯ್ಕ ಮಾತನಾಡಿ, ಬಜೆಟ್ ಮಂಡನೆಯ ಸಭೆಗೆ ಅಡ್ಡಿಪಡಿಸುವ ಉದ್ದೇಶ ನಮ್ಮದಲ್ಲ. ಇಲ್ಲಿ ಪಾರದರ್ಶಕತೆ ಅತ್ಯಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಎಲ್ಲವನ್ನೂ ಕೂಲಂಕುಶ ಪರಿಶೀಲನೆ ಮಾಡಿ ಸ್ಪಷ್ಟ ಉತ್ತರ ನೀಡುವರೆಂಬ ನಿರೀಕ್ಷೆ ನಮ್ಮೆಲ್ಲರದು ಎಂದರು.ಸದಸ್ಯ ಸೋಮೇಶ್ವರ ನಾಯ್ಕ, ಪ್ರತಿ ಮಾಸಿಕ ಸಭೆಗಳಲ್ಲಿ ಕೈಗೊಳ್ಳುವ ಠರಾವು ಪ್ರತಿಗಳನ್ನೂ ಕೂಡಾ ನೀಡದೇ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಆಕ್ಷೇಪಿಸಿದರು. ಆಗ ಎಂ. ಗುರುರಾಜ, ಅಧಿಕಾರಿಗಳ ಯಾವುದೇ ವಿಳಂಬ ಧೋರಣೆಯನ್ನು ನಾನು ಸಮರ್ಥಿಸುವುದಿಲ್ಲ ಎಂದು ಎಚ್ಚರಿಸಿದರು.ಇತ್ತೀಚೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಹಲವಾರು ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬೈಯಿಸಿಕೊಳ್ಳುವ ಪ್ರಸಂಗ ಉಂಟಾಗಿದೆ ಎಂದು ಸತೀಶ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಅನೇಕ ಸಂಗತಿಗಳ ಸುದೀರ್ಘ ಚರ್ಚೆಯ ನಂತರ ಮಾತನಾಡಿದ ಆಡಳಿತಾಧಿಕಾರಿ ಗುರುರಾಜ, ಪಪಂ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲು ಸದಸ್ಯರಿಗೆ ಸಲಹೆ ನೀಡಿದರು. ಪ್ರವಾಸೋದ್ಯಮಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಪಪಂ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ತುಸು ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.ಇಡೀ ವರ್ಷದ ಮತ್ತು ಮಾಸಿಕ ಸಭೆಯ ಸಂದರ್ಭದ ಎಲ್ಲ ಜಮಾ-ಖರ್ಚುಗಳ ಸಮಗ್ರ ಲೆಕ್ಕವನ್ನು ಅಧಿಕಾರಿಗಳು ನೀಡುವಂತೆ ಹೇಳಿದರು. ಸಭೆಯಲ್ಲಿ ಪಟ್ಟಣದಲ್ಲಿ ಅಳವಡಿಸಲಾದ ಎಲ್‌ಇಡಿ ಬೀದಿದೀಪ, ಬೀದಿ ನಾಯಿ ಮತ್ತು ಹಂದಿಗಳ ಹಾವಳಿ ಕುರಿತಾಗಿಯೂ ಚರ್ಚೆ ನಡೆಯಿತಾದರೂ ಸ್ಪಷ್ಟ ಉತ್ತರ ಕೇಳಿಬರಲಿಲ್ಲ. ಹೊರ ಪ್ರದೇಶದಿಂದ ಬೀದಿ ನಾಯಿಗಳನ್ನು ಪಟ್ಟಣದಲ್ಲಿ ತಂದು ಬಿಡುತ್ತಿರುವುದರಿಂದ ಇಂತಹ ತೊಂದರೆ ಉಂಟಾಗಿದೆ. ಪೋಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡರೆ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರಕಬಹುದೆಂದು ರಾಧಾಕೃಷ್ಣ ನಾಯ್ಕ ಹೇಳಿದರು.