ಗದಗ: ರಸ್ತೆ ಸುರಕ್ಷತೆ ಮತ್ತು ಜೀವರಕ್ಷಕ ಹೆಲ್ಮೆಟ್ ಬಳಕೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವಿನೂತನ ಜಾಗೃತಿ ಅಭಿಯಾನವನ್ನು ಗುರುವಾರ ನಡೆಸಿ ಗಮನ ಸೆಳೆಯಿತು.

ನಗರದ ಮಾಳಶೆಟ್ಟಿ ವೃತ್ತದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಯಮ, ಚಿತ್ರಗುಪ್ತ ಹಾಗೂ ಕಿಂಕರರ ವೇಷ ಧರಿಸಿದ ಪೊಲೀಸ್ ಸಿಬ್ಬಂದಿ ಮತ್ತು ಹೋಮ್‌ಗಾರ್ಡ್‌ಗಳು ಸಾರ್ವಜನಿಕರ ಗಮನ ಸೆಳೆದರು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು, ರಸ್ತೆ ಅಪಘಾತಗಳಿಂದ ಉಂಟಾಗುವ ಅಪಾಯಗಳ ಕುರಿತು ಅರಿವು ಮೂಡಿಸಲಾಯಿತು.

ಅಭಿಯಾನದ ವೇಳೆ ಯಮನ ಪಾತ್ರದಲ್ಲಿ ಹವಾಲ್ದಾರ್ ಎಚ್.ಎಸ್. ವೆಂಕಟಾಪುರ ಹಾಗೂ ಚಿತ್ರಗುಪ್ತನ ಪಾತ್ರದಲ್ಲಿ ಚಂದ್ರು ಬಾರಕೇರ ಕಾಣಿಸಿಕೊಂಡು, ಜೀವ ಅಮೂಲ್ಯ, ಹೆಲ್ಮೆಟ್ ನಿಮ್ಮ ರಕ್ಷಾಕವಚ ಎಂಬ ಸಂದೇಶವನ್ನು ವಿನೂತನವಾಗಿ ಸಾರಿದರು. ಹೋಮ್‌ಗಾರ್ಡ್ ಸಿಬ್ಬಂದಿ ಕಿಂಕರರ ವೇಷದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು.

ಹೆಲ್ಮೆಟ್ ಧರಿಸದೆ ಬಂದ ಸವಾರರಿಗೆ ಚಿತ್ರಗುಪ್ತರ ಮೂಲಕ ಪಾಪದ ಲೆಕ್ಕಾಚಾರವನ್ನು ಹಾಸ್ಯಮಯವಾಗಿ ವಿವರಿಸಿ, ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಜೀವ ಉಳಿಸುವಲ್ಲಿ ವಹಿಸುವ ಪಾತ್ರವನ್ನು ಮನವರಿಕೆ ಮಾಡಿಕೊಡಲಾಯಿತು. ಮತ್ತೊಂದೆಡೆ, ನಿಯಮಾನುಸಾರ ಹೆಲ್ಮೆಟ್ ಧರಿಸಿ ಬಂದ ಸವಾರರಿಗೆ ಹೂವು ನೀಡಿ ಅಭಿನಂದಿಸಿ, ಅವರ ಜವಾಬ್ದಾರಿಯುತ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ತಲೆಗೆ ಗಂಭೀರ ಗಾಯಗಳಾಗುವ ಪ್ರಕರಣಗಳು ಹೆಚ್ಚುತ್ತಿದ್ದು, ಹೆಲ್ಮೆಟ್ ಧರಿಸುವುದರಿಂದ ಜೀವಹಾನಿಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಗುಣಮಟ್ಟದ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.


ಉತ್ತಮ ಪ್ರತಿಕ್ರಿಯೆ: ಗದಗ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ದಂಡ ವಿಧಿಸುವುದಕ್ಕಿಂತ ಜಾಗೃತಿ ಮೂಡಿಸುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಪ್ರೇರೇಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ತಿಳಿಸಿದರು.

ಸಾರ್ವಜನಿಕರ ಮೆಚ್ಚುಗೆ...

ವಿನೂತನ ಪರಿಕಲ್ಪನೆಯ ಈ ಜಾಗೃತಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಅರಿವು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ. ಇಲಾಖೆ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿ ಹೆಲ್ಮೆಟ್ ಹಾಕಿಕೊಳ್ಳುವಂತೆ ತಿಳಿಸಿದರೂ ಸಾರ್ವಜನಿಕರು ಜಾಗೃತಿ ವಹಿಸದೇ ಇರುವುದು ಬೇಸರದ ಸಂಗತಿಯಾಗಿದೆ ಎನ್ನುವುದು ಸ್ಥಳದಲ್ಲಿದ್ದ ಹಲವಾರು ಸಾರ್ವಜನಿಕರಿಂದ ಕೇಳಿ ಬಂದ ಅಭಿಪ್ರಾಯವಾಗಿದೆ.