ಸಾರಾಂಶ
ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆ ಸಿದ್ಧಿವಿನಾಯಕ ಪ್ರೌಢಶಾಲಾ ಮೈದಾನದಲ್ಲಿ ಯಶಸ್ವಿನಿ ಸಾಂಸ್ಕೃತಿಕ ವೇದಿಕೆಯ 22ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ನಡೆಯಿತು.ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಖರ್ವಾ ಗ್ರಾಪಂ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಇಂದಿನ ದಿನಗಳಲ್ಲಿ ಸಂಘ ಕಟ್ಟಿ ಬೆಳೆಸುವುದು ಬಹಳ ಕಷ್ಟವಾದದು. ಆದರೆ ಯಶಸ್ವಿನಿ ವೇದಿಕೆ ಅವರು ಕಳೆದ 22 ವರ್ಷದಿಂದ ಉತ್ತಮವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಸ್ಥಳೀಯ ಕಲಾವಿದರು, ಊರಿನ ಹಿರಿಯರನ್ನು ಸೇರಿಸಿ ಸಂಘ ರಚಿಸಿದ್ದಾರೆ. ಕಲೆ ಉಳಿಸುವ ಜತೆಗೆ ಪ್ರತಿಭೆಗಳಿಗೆ ಪ್ರೋತ್ಸಾಹ, ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ. ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಭಿನಂದಿಸಿದರು.
ಸಿಆರ್‌ಪಿ ಎಸ್.ಎಂ. ಭಟ್ ಮಾತನಾಡಿ, ಅಂಗೈಯಲ್ಲಿರುವ ಮೊಬೈಲ್ ನಿಂದ ನಮ್ಮ ಸಂಸ್ಕೃತಿ, ಕಲೆ ನಶಿಸುತ್ತಿದೆ. ಮನೆಯಲ್ಲಿರುವ ಸಂಸ್ಕೃತಿಯಿಂದ ಹಿಡಿದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಳಿಸಿಕೊಳ್ಳಲು ವಿಫಲರಾಗುತ್ತಿದ್ದೇವೆ. ಕಲೆ ಮತ್ತು ಸಂಸ್ಕೃತಿ ಉಳಿಸಿಬೆಳೆಸುವ ಕಾರ್ಯ ಆಗಬೇಕು. ಏತನ್ಮಧ್ಯೆ, ಯಶಸ್ವಿನಿ ಸಾಂಸ್ಕೃತಿಕ ವೇದಿಕೆಯಂತಹ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ಲಾಘಿಸಿದರು.ಯಶಸ್ವಿನಿ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಟಿ.ಎಚ್. ಗೌಡ ಮಾತನಾಡಿ, ಸಂಘಟನೆ ಯಾವುದೇ ನೂನ್ಯತೆ ಇಲ್ಲದೇ ಮುಂದುವರೆಯುತ್ತಿದೆ. ಪ್ರತಿವರ್ಷ ನಿರಾಶೆಯಿಂದ ಕಾರ್ಯಕ್ರಮ ಆರಂಭಿಸಿದರೂ ನಂತರ ಸಿಗುವ ಉತ್ತಮ ಪ್ರತಿಕ್ರಿಯೆಯಿಂದ ನಮ್ಮನ್ನು ಹುರಿದುಂಬಿಸುತ್ತಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಸ್. ನಾಯ್ಕ, ನಿವೃತ್ತ ಶಿಕ್ಷಕಿ ಪ್ರಪೇತಾ ಲೋಪಿಸ್ ಅವರನ್ನು ಸನ್ಮಾನಿಸಲಾಯಿತು. ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚೈತ್ರಾ ಹೆಗಡೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ದಿವಿನಾಯಕ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ಮಾನಸ ಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿನಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜಿ.ಕೆ ಗೌಡ ಮಾತನಾಡಿ, ಯುವ ಜನಾಂಗ ಸಮಯ ವ್ಯರ್ಥ ಮಾಡುವ ಬದಲು ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಜೊತೆಗೆ ಕಲೆಗಳ ಉಳಿವಿಗೆ ಸಹಕರಿಸಬೇಕು ಎಂದರು.
ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ನಿರ್ದೇಶಕ ಸತ್ಯಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ನಶಿಸಿ ಹೋಗುತ್ತಿರುವ ಕಲೆಗಳ ಉಳಿವಿಗೆ ವೇದಿಕೆ ಹಲವು ವರ್ಷಗಳಿಂದ ಪ್ರೋತ್ಸಾಹ ನೀಡುತ್ತಾ,ಹಲವು ಕಲಾವಿದರ ಪರಿಚಯಿಸಿದೆ. ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದರು.ವೇದಿಕೆಯಲ್ಲಿ ಖರ್ವಾ ವಿಎಸ್ ಎಸ್ ಅಧ್ಯಕ್ಷ ದೇವಾಗೌಡ, ನಿರ್ದೇಶಕ ಗಜಾನನ ನಾಯ್ಕ, ಸಿದ್ಧಿವಿನಾಯಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಲ್. ನಾಯ್ಕ ಉಪಸ್ಥಿತರಿದ್ದರು. ವಿಷ್ಣು ಆಚಾರಿ ಪ್ರಾರ್ಥಿಸಿದರು. ಮೋಹನ ನಾಯ್ಕ ಸ್ವಾಗತಿಸಿದರು. ದತ್ತಾತ್ರೇಯ ಮೇಸ್ತ ವರದಿ ವಾಚಿಸಿದರು. ಶಿಕ್ಷಕರಾದ ಡಿ.ಬಿ. ಮುರಾರಿ ನಿರ್ವಹಿಸಿದರು.
ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ಯಶಸ್ವಿನಿ ಸಾಂಸ್ಕೃತಿಕ ವೇದಿಕೆ ಹಾಗೂ ಅತಿಥಿ ಕಲಾವಿದರಿಂದ ''''''''ರೈತ ಮನೆತನ'''''''' ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮನಸೂರೆಗೊಂಡಿತು.