ಗೋಶಾಲೆಗಳ ನಿರ್ವಹಣೆಗೆ ಅನುದಾನ ಒದಗಿಸಲು ಯಶ್ಪಾಲ್ ಮನವಿ

| Published : Jul 07 2025, 11:48 PM IST

ಸಾರಾಂಶ

ರೈತರು ಸಾಕಲು ಕಷ್ಟವಾಗಿರುವ ಗಂಡು ಕರುಗಳು, ಬರಡು ದನಗಳನ್ನು ಮತ್ತು ಬೀಡಾಡಿ ದನಗಳನ್ನು ಹಾಗೂ ಅಕ್ರಮ ಸಾಗಾಟದ ಪ್ರಕರಣದಲ್ಲಿ ವಶಪಡಿಸಿಕೊಂಡ ದನಗಳನ್ನು ಪೊಲೀಸರು ಖಾಸಗಿ ಗೋಶಾಲೆಗಳಿಗೆ ಬಿಡುತ್ತಿದ್ದಾರೆ. ಈ ಖಾಸಗಿ ಗೋಶಾಲೆಗಳ ನಿರ್ವಹಣೆಗೆ ಅನುದಾನದ ಕೊರತೆಯಿಂದ ಗೋವುಗಳ ಆರೈಕೆಗೆ ಸಮಸ್ಯೆ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಲ್ಲಿ ಗೋವುಗಳ ರಕ್ಷಣೆ ಹಾಗೂ ಸೇವೆಯಲ್ಲಿ ನಿರತವಾಗಿರುವ ಗೋಶಾಲೆಗಳ ನಿರ್ವಹಣೆಗೆ ರಾಜ್ಯ ಸರ್ಕಾರದ ವತಿಯಿಂದ ಅನುದಾನ ಒದಗಿಸುವಂತೆ ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.ಸನಾತನ ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿರುವ ಗೋವುಗಳ ರಕ್ಷಣೆಗೆ ಮತ್ತು ಪಾಲನೆಗೆ ಜಿಲ್ಲೆಗಳಲ್ಲಿ ಹಲವು ಗೋಶಾಲೆಗಳು ಕಾರ್ಯಾಚರಿಸುತ್ತಿದ್ದು, ರೈತರು ಸಾಕಲು ಕಷ್ಟವಾಗಿರುವ ಗಂಡು ಕರುಗಳು, ಬರಡು ದನಗಳನ್ನು ಮತ್ತು ಬೀಡಾಡಿ ದನಗಳನ್ನು ಹಾಗೂ ಅಕ್ರಮ ಸಾಗಾಟದ ಪ್ರಕರಣದಲ್ಲಿ ವಶಪಡಿಸಿಕೊಂಡ ದನಗಳನ್ನು ಪೊಲೀಸರು ಖಾಸಗಿ ಗೋಶಾಲೆಗಳಿಗೆ ಬಿಡುತ್ತಿದ್ದಾರೆ. ಈ ಖಾಸಗಿ ಗೋಶಾಲೆಗಳ ನಿರ್ವಹಣೆಗೆ ಅನುದಾನದ ಕೊರತೆಯಿಂದ ಗೋವುಗಳ ಆರೈಕೆಗೆ ಸಮಸ್ಯೆ ಉಂಟಾಗುತ್ತಿದೆ.ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಶಿವಪುರದಲ್ಲಿ ಸ್ಥಾಪಿಸಲಾದ ಏಕೈಕ ಸರ್ಕಾರಿ ಗೋಶಾಲೆಯಲ್ಲಿ ಕೇವಲ 60 ಹಸುಗಳನ್ನು ಪೋಷಿಸುವಷ್ಟು ಕಟ್ಟಡ ಮಾತ್ರವಿದ್ದು, ಈ ಕಟ್ಟಡಗಳು ಕೂಡ ನಾದುರಸ್ಥಿ ಹಂತದಲ್ಲಿದೆ. ಈ ಗೋಶಾಲೆಯ ಹಿತದೃಷ್ಟಿಯಿಂದ ಸಮರ್ಪಕ ನಿರ್ವಹಣೆಗೆ ಪೇಜಾವರ ಶ್ರೀಗಳ ನೇತೃತ್ವದಲ್ಲಿರುವ ಟ್ರಸ್ಟಿಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ್ದರೂ ಇನ್ನೂ ಹಸ್ತಾಂತರವಾಗದ ಪರಿಣಾಮ ತೊಂದರೆ ಉಂಟಾಗುತ್ತಿದೆ.ರಾಜ್ಯ ಸರ್ಕಾರ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಗೋಶಾಲೆಯ ನಿರ್ವಹಣೆಯ ಉಸ್ತುವಾರಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸುವ ನಿರ್ಣಯನ್ನು ಶೀಘ್ರವಾಗಿ ಮಾಡಬೇಕು ಅಥವಾ ಗೋಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಗೋಶಾಲೆಗಳ ಸಮರ್ಪಕ ನಿರ್ವಹಣೆಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.