ಸಾರಾಂಶ
ಹಿರಿಯ ರಂಗ ನಿರ್ದೇಶಕ, ಕಲಾವಿದ ಯಶವಂತ ಸರದೇಶಪಾಂಡೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿರಿಯ ರಂಗ ನಿರ್ದೇಶಕ, ಕಲಾವಿದ ಯಶವಂತ ಸರದೇಶಪಾಂಡೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ನಡೆಯಿತು.ಪತ್ನಿ ಮಾಲತಿ ಸರದೇಶಪಾಂಡೆ, ಪುತ್ರಿ ಕಲ್ಪಶ್ರೀ, ಯಶವಂತ ಸರದೇಶಪಾಂಡೆ ಅವರ ಸಹೋದರರು, ಹಲವು ಮಂದಿ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರು ಕಣ್ಣೀರ ವಿದಾಯ ಹೇಳಿದರು. ಪುತ್ರಿ ಕಲ್ಪಶ್ರೀ ಮತ್ತು ಯಶವಂತ ಸರದೇಶಪಾಂಡೆ ಅವರ ತಮ್ಮಂದಿರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಸರದೇಶಪಾಂಡೆ ಅವರ ಕೊನೆಯ ಸೋದರ ಗೋಪಾಲ್ ಅವರು ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಸರದೇಶಪಾಂಡೆ ಅವರು ಪಂಚಭೂತಗಳಲ್ಲಿ ಲೀನವಾದರು. ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಯಶವಂತ ಸರದೇಶಪಾಂಡೆ ನಿಧನರಾಗಿದ್ದರು. ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12.45ರವರೆಗೆ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಆವರಣದ ಸಂಸ ಬಯಲು ರಂಗಮಂದಿರದ ಬಳಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.ಈ ವೇಳೆ ಚಲನಚಿತ್ರ ನಟರು, ರಂಗಭೂಮಿ ಕಲಾವಿದರೂ ಆದ ಮುಖ್ಯಮಂತ್ರಿ ಚಂದ್ರು, ಬಿ.ವಿ. ರಾಜಾರಾಂ, ಶ್ರೀನಿವಾಸ ಜಿ. ಕಪ್ಪಣ್ಣ, ಮಂಡ್ಯ ರಮೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ದನಂಜಯ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಸೇರಿದಂತೆ ವಿವಿಧ ರಂಗಗಳ ಗಣ್ಯರು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಸುಮಾರು 2.15ರ ಹೊತ್ತಿಗೆ ಟಿ.ಆರ್. ಮಿಲ್‌ನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಯಶವಂತ ಸರದೇಶಪಾಂಡೆ ಅವರು ‘ರಾಶಿಚಕ್ರ’, ‘ಆಲ್ ದಿ ಬೆಸ್ಟ್’ನಂತಹ ನಾಟಕಗಳಲ್ಲಿನ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಪತ್ನಿ ಮಾಲತಿ ಸರದೇಶಪಾಂಡೆ ಕೂಡ ರಂಗಕಲಾವಿದೆಯಾಗಿದ್ದಾರೆ.