ಯತೀಂದ್ರ ಹೇಳಿಕೆ: ಕಮಲ-ಕೈ ಜಟಾಪಟಿ

| Published : Jul 27 2025, 12:01 AM IST

ಸಾರಾಂಶ

ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಹೆಚ್ಚು ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂಬ ಎಂಎಲ್‌ಸಿ ಡಾ। ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಹೆಚ್ಚು ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂಬ ಎಂಎಲ್‌ಸಿ ಡಾ। ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದೆ ಎನ್ನುವ ಮೂಲಕ ಪುತ್ರನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮೈಸೂರಲ್ಲಿ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಯಾರು ಯಾರಿಗೂ ಹೊಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಮಹಾರಾಜರು ಅವರ ಕೆಲಸ ಮಾಡಿದ್ದಾರೆ. ಇವರು ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಮಹಾರಾಜರು ಏನು ಮಾಡಿದ್ದಾರೆ ಎಂಬುದು‌ ಜನರಿಗೆ ಗೊತ್ತಿದೆ. ನಾನು ಅದೇ ವಂಶಸ್ಥನಾಗಿ ಈ ಬಗ್ಗೆ ಮಾತನಾಡಿದರೆ ಸರಿ ಅನ್ನಿಸುವುದಿಲ್ಲ ಎಂದು ಯತೀಂದ್ರ ಹೇಳಿಕೆಯನ್ನು ಖಂಡಿಸಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಕಳೆದ 15 ವರ್ಷಗಳಿಂದ ಏನು ಕೊಟ್ಟಿದ್ದೀರಾ? ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಏನು ಅಭಿವೃದ್ಧಿ ಮಾಡಿದ್ದೇವೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.ಉಡಾಫೆ ಓಡಾಡಿದ್ದೆ ಸಿದ್ದು

ಸಾಧನೆ: ಪ್ರತಾಪ್ ಸಿಂಹ

ಇದು ಯತೀಂದ್ರ ಮಾತಲ್ಲ. ಸಿದ್ದರಾಮಯ್ಯ ಅವರ ಅಂತರಾಳದ ಭಾವನೆ ಕೂಡ ಇದೇ ಆಗಿದೆ. ಮಹಾರಾಜರ ಕುಟುಂಬದ ಬಗ್ಗೆ ಸಿದ್ದುಗೆ ದ್ವೇಷ, ಅಪಥ್ಯ ಭಾವನೆ ಇದೆ. ಅನಧಿಕೃತ ವರ್ಗಾವಣೆ ಖಾತೆ ಸಚಿವ ಡಾ। ಯತೀಂದ್ರ ಅವರೇ ನಿಮ್ಮಪ್ಪನ ಕೊಡುಗೆ ಏನು ಹೇಳಿ? ಕೆ.ಆರ್.ಆಸ್ಪತ್ರೆಗೆ ಸುಣ್ಣ ಹೊಡೆಸಲು ನಿಮ್ಮಪ್ಪನ ಕೈಯಲ್ಲಿ ಆಗಿಲ್ಲ. ನಿಮ್ಮ ಅಮ್ಮ-ಅಪ್ಪ ಮುಡಾದಲ್ಲಿ ಸೈಟ್ ಹೊಡೆದರು. ನಾಲ್ವಡಿ ಮಹಾರಾಜರು ನಾಡ ಬೆಳಗಿದರು. ನೀವು ವರ್ಗಾವಣೆಯಲ್ಲಿ ಒಳ್ಳೆಯ ಕಮಾಯಿ ಮಾಡಿಕೊಂಡು ಆರಾಮಾಗಿ ಇದ್ದೀರಿ. ಉಡಾಫೆ ಮಾತಾಡಿಕೊಂಡು ಓಡಾಡಿದ್ದೆ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ಧಿ ಬಗ್ಗೆ ಚರ್ಚೆಗೆ ಸಿಎಂ ಪಂಥಾಹ್ವಾನಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಸಿಎಂ ಅವರೇ ವೇದಿಕೆ ಸಿದ್ಧ ಮಾಡಿ ನಾವು ಬರುತ್ತೇವೆ. ಚರ್ಚೆ ಮಾಡಿಯೇ ಬಿಡೋಣ. ಕಲಘಟಗಿ ಲಾಡು, ಮರಿ ಖರ್ಗೆ, ನಿಮ್ಮ ಮಗ ಯತೀಂದ್ರ ಎಲ್ಲರನ್ನೂ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದರು.++++ಎಸ್.ಎಂ.ಕೃಷ್ಣ ಆಡಳಿತಕ್ಕೂ

ಸಮವಿಲ್ಲ: ಎಚ್.ವಿಶ್ವನಾಥ್

ನಾಲ್ವಡಿ ಕೃಷ್ಣರಾಜರ ಆಡಳಿತ ಇರಲಿ ಮಾಜಿ ಸಿಎಂಗಳಾದ ದೇವರಾಜ್ ಅರಸು, ಎಸ್.ಎಂ.ಕೃಷ್ಣ ಅವರ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತ ಸಮವಿಲ್ಲ ಎಂದು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಯತೀಂದ್ರ ಹೇಳಿಕೆ ದುರಹಂಕಾರದ ಪರಮಾವಧಿ. ಈ ರಾಜ್ಯಕ್ಕೆ ಸಿದ್ದರಾಮಯ್ಯ ಕೊಟ್ಟ ಕೊಡುಗೆ ಬಗ್ಗೆ ಮೊದಲು ಹೇಳಲಿ. ನಾನೇ ನಾನೇ ಎನ್ನುವ ಅಹಂ, ದುರಹಂಕಾರ ಸಿದ್ದರಾಮಯ್ಯ ಕುಟುಂಬದ ವಂಶವಾಹಿಯಲ್ಲಿ ಹರಿದು ಬಂದಿದೆ. ಸಿದ್ದರಾಮಯ್ಯ ಹಾಗೂ ಅವರ ಮಗ ಎಚ್ಎಂ (ಹುಚ್ಚು ಮುಂಡೇದು) ರೀತಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಈ ಹಿಂದೆ ಮಹಾರಾಜರು ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರಾ? ಎಂದು ಕೇಳಿದ್ದರು. ಸಿದ್ದರಾಮಯ್ಯ ಏನೂ ಈಗ ಅವರ ಅಪ್ಪನ‌‌ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡುತ್ತಿದ್ದಾರಾ? ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಕೆ ಮಾಡುವ ಯಾವ ರಾಜಕಾರಣಿ ಈ ದೇಶದಲ್ಲೇ ಇಲ್ಲ ಎಂದು ತಿಳಿಸಿದರು.ಪ್ರಪಂಚಕ್ಕೆ ಸಿಎಂ ಹೆಚ್ಚು

ಕೊಡುಗೆ: ಈಶ್ವರಪ್ಪ ವ್ಯಂಗ್ಯ

ವಿಶ್ವದ ಎಲ್ಲ ನಾಯಕರಿಗಿಂತ ಪ್ರಪಂಚಕ್ಕೆ ಹೆಚ್ಚು ಕೊಡುಗೆ ಕೊಟ್ಟಿದ್ದು ಸಿದ್ದರಾಮಯ್ಯ. ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ಗಿಂತಲೂ ಅಭಿವೃದ್ಧಿ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿ, ಒಡೆಯರ್‌ ಅವರ ಹೆಸರು ಹೇಳುವ ಯೋಗ್ಯತೆ ಆದರೂ ಯತೀಂದ್ರಗೆ ಇದೆಯಾ? ಒಂದಿಷ್ಟು ದಿನ ದೇವರಾಜ್ ಅರಸು ಅವರೊಂದಿಗೆ ಹೋಲಿಕೆ ಮಾಡಿಕೊಂಡರು. ಸಿಎಂ ಬಾಲಂಗೋಚಿ ಆಂಜನೇಯ, ದೇವರಾಜ್ ಅರಸರಿಗಿಂತಲೂ ಜಾಸ್ತಿ ಸಿದ್ದರಾಮಯ್ಯ ಎಂದಿದ್ದರು. ಈಗ ಪುತ್ರ ಯತೀಂದ್ರ ಒಡೆಯರ್‌ಗೆ ಹೋಲಿಕೆ ಮಾಡಿದ್ದಾನೆ. ಅದರಲ್ಲಿ ಯಾವುದೇ ಅರ್ಥವೇ ಇಲ್ಲ ಎಂದು ಕಿಡಿಕಾರಿದರು.