ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವದ ನಾಯಕರಾಗಿದ್ದು, ಯಾವುದೇ ಜಾತಿಯ ಸ್ವತ್ತಾಗಿಲ್ಲ. ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿದಾಗ ಎಲ್ಲ ಹಿಂದು ಸಮಾಜ ಬಾಂಧವರು ಒಗ್ಗೂಡಿ ಹೋರಾಟ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸುರೇಶ ಹಜೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕ ನಡಹಳ್ಳಿ ಅವರ ಸಹೋದರ ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಅವರು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮೇಲೆ ವೈಯಕ್ತಿಕ ದ್ವೇಷದಿಂದ ಆರೋಪ ಮಾಡುವ ಬರದಲ್ಲಿ ಸಹನೆ ಕಳೆದುಕೊಂಡು ಹೇಳಿಕೆ ನೀಡಿರುವುದು ಸರಿಯಲ್ಲ. ಬಸನಗೌಡ ವಣಕ್ಯಾಳ ಅವರು ಬಿಜೆಪಿ ಸಿದ್ದಾಂತದ ಬಗ್ಗೆ ಮಾತನಾಡುವ ಮೊದಲು ತಾವು ಯಾವ ಪಕ್ಷದಲ್ಲಿದ್ದಾರೆಂಬುದನ್ನು ಅರಿಯಬೇಕು. ಜೆಡಿಎಸ್ ಪಕ್ಷದಲ್ಲಿದ್ದು ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುವದು ಎಷ್ಟು ಸರಿ ಎಂದು ಯೋಚಿಸಬೇಕು. ನಡಹಳ್ಳಿ ಅವರು ಶಾಸಕರಾಗಿದ್ದಾಗ ಯಾವೊಬ್ಬ ಬಿಜೆಪಿ ಕಾರ್ಯಕರ್ತರ ನೋವನ್ನು ಕೇಳಿಲ್ಲ. ತಮ್ಮ ಹಿಂಬಾಲಕರಿಗೆ ಮಣೆ ಹಾಕಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದಿದ್ದಾಗ್ಯೂ ಯತ್ನಾಳ ಅವರ ಮೂಲಕ ಕಾರ್ಯಕರ್ತರ ಕೆಲಸ ಮಾಡಿಸಿಕೊಂಡಿದ್ದಾರೆ. ಪ್ರಭುಗೌಡ ದೇಸಾಯಿ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡುವುದು ಒಳಿತು ಎಂದ ಎಚ್ಚರಿಸಿದರು.ಬಿಜೆಪಿ ಮುಖಂಡ ರಾಮು ಜಗತಾಪ ಮಾತನಾಡಿ, ಯತ್ನಾಳ ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿರುವುದರಿಂದ ಅಭಿಮಾನದಿಂದ ಕಾಣುತ್ತಿದ್ದೇವೆ. ಉಚ್ಚಾಟಿಸಿರುವದು ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಬಸನಗೌಡ ವಣಕ್ಯಾಳ ಮಾತಿನ ಬರದಲ್ಲಿ ಯತ್ನಾಳ ಅವರ ಬಗ್ಗೆ ಹಗುರವಾಗಿ ಮಾತನಾಡಿದಲ್ಲದೇ ಅವರ ಅಭಿಮಾನಿಗಳಿಗೆ ನೋವು ತರುವ ಹೇಳಿಕೆ ನೀಡಿದ ನಡಹಳ್ಳಿ ಅವರ ಮೇಲೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಅದನ್ನು ಸರಿದೂಗಿಸುವುದನ್ನು ಬಿಟ್ಟು ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸಬೇಡಿ. ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಜನರಿಗೆ ಗೊತ್ತಿದೆ ಎಂದರು.ಬಿಜೆಪಿ ಮುಖಂಡರಾದ ಸಂತೋಷ ಹಜೇರಿ, ಮಂಜುನಾಥ ಶೆಟ್ಟಿ, ಬಸನಗೌಡ ಮಾಲಿಪಾಟೀಲ, ನಾಗರಾಜ ಬಳಿಗಾರ, ಶಶಿಧರ ಡಿಸಲೆ, ಮುರುಗೇಶ ಕೋರಿ, ಅಶೋಕ ಚಿನಗುಡಿ, ಭೀಮು ಸೂಳಿಭಾವಿ, ನಾಗಪ್ಪ ಗೊಟಗುಣಕಿ, ಲಂಕೇಶ ಪಾಟೀಲ, ಗುರಸಂಗ ಕಶೆಟ್ಟಿ, ಜಗದೀಶ ಬಿಳೇಭಾವಿ, ಚಂದ್ರು ಗೆಜ್ಜಿ, ಸುರೇಶ ಪಾಟೀಲ, ಕಾಶೀನಾಥ ಪಾಟೀಲ, ಶಶಿಕಾಂತ ದೇಶಪಾಂಡೆ, ಸಂಗಮೇಶ ಪಾಟೀಲ ಮೊದಲಾದವರು ಇದ್ದರು.