ಗವಿಸಿದ್ದಪ್ಪನ ಮನೆಗೆ ಯತ್ನಾಳ, ಈಶ್ವರಪ್ಪ ಭೇಟಿ

| Published : Aug 11 2025, 12:33 AM IST

ಸಾರಾಂಶ

ಒಂದು ವರ್ಷದಿಂದ ಪ್ರೀಪ್ಲ್ಯಾನ್ ಮಾಡಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ವಾಟ್ಸ್‌ಆ್ಯಪ್‌ಗೆ ನಿಮ್ಮ ಫೊಟೋ ಹಾಕಿಕೊಂಡಿದ್ದ ಸರ್ ಎಂದು ಯತ್ನಾಳಗೆ ಗವಿಸಿದ್ದಪ್ಪ ತಂದೆ ತೋರಿಸಿದರು

ಕೊಪ್ಪಳ: ನಗರದ ವಾರ್ಡ್‌ 3ರಲ್ಲಿ ಕಳೆದ ಭಾನುವಾರ ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಮಸೀದಿ ಮುಂಭಾಗದಲ್ಲಿ ಕೊಲೆಯಾಗಿದ್ದ ಹಿಂದೂ ಯುವಕ ಗವಿಸಿದ್ದಪ್ಪನ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಗವಿಸಿದ್ದಪ್ಪನ ತಂದೆ ನಿಂಗಜ್ಜ, ತಾಯಿ ದೇವಮ್ಮ ಕೊಲೆಯಾದ ತಮ್ಮ ಮಗ ಗವಿಸಿದ್ದಪ್ಪ ಯತ್ನಾಳ ಜತೆ ತೆಗೆಸಿಕೊಂಡ ಫೋಟೋ ತೋರಿಸಿದರು. ಅಲ್ಲದೆ ವಾಟ್ಸ್‌ಆ್ಯಪ್‌ ಡಿಪಿಗೆ ಯತ್ನಾಳ ಜತೆಯಿದ್ದ ಪೋಟೋ ಇಟ್ಟುಕೊಂಡಿದ್ದನ್ನು ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮುಂದೆ ಗವಿಸಿದ್ದಪ್ಪ ಯತ್ನಾಳ ಜತೆಗಿರುವ ಪೋಟೋ ಹಿಡಿದುಕೊಂಡು ಗವಿಸಿದ್ದಪ್ಪ ಪೋಷಕರು ಕುಳಿತಿದ್ದರು.

ಗವಿಸಿದ್ದಪ್ಪ ನಿಮ್ಮ ಅಭಿಮಾನಿಯಾಗಿದ್ದ ಸರ್ ಎಂದು ಯತ್ನಾಳ ಅವರಿಗೆ ಹೇಳಿದರು. ಯತ್ನಾಳ ಜತೆ ಇದ್ದ ಫೋಟೋ ತೋರಿಸಿ ನ್ಯಾಯ ಕೊಡಿಸಬೇಕು ಎಂದು ಕಣ್ಣೀರು ಹಾಕಿದರು. ನಮ್ ಮಗನನ್ನು ಮಸೀದಿ ಮುಂದೆ ಕೊಲೆ ಮಾಡ್ಯಾರ. ಕೊಲೆ ಮಾಡಿ ನಮಾಜ್ ಸಹ ಮಾಡಿದ್ದಾರೆ ರೀ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದಿಂದ ಪ್ರೀಪ್ಲ್ಯಾನ್ ಮಾಡಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ವಾಟ್ಸ್‌ಆ್ಯಪ್‌ಗೆ ನಿಮ್ಮ ಫೊಟೋ ಹಾಕಿಕೊಂಡಿದ್ದ ಸರ್ ಎಂದು ಯತ್ನಾಳಗೆ ಗವಿಸಿದ್ದಪ್ಪ ತಂದೆ ತೋರಿಸಿದರು.

ಕೊಲೆಯಾದ ಗವಿಸಿದ್ದಪ್ಪನ ಸಹೋದರಿಯರಾದ ಅನ್ನಪೂರ್ಣಾ, ದುರ್ಗಮ್ಮ, ಉಮಾ, ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಮುಖಂಡ ಬಸಲಿಂಗಪ್ಪ ಭೂತೆ ಹಾಗೂ ಇತರರಿದ್ದರು.