ಸಾರಾಂಶ
ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಣೆಗೆ ಅನುಮತಿ ನೀಡದೆ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಹೋರಾತ್ರಿ ಧರಣಿ
ಬೆಂಗಳೂರು : ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಣೆಗೆ ಅನುಮತಿ ನೀಡದೆ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಹೋರಾತ್ರಿ ಧರಣಿ ನಡೆಸಿದ್ದು, ಅವರ ಬೆಂಬಲಕ್ಕೆ ಧಾವಿಸಿದ ಬಿಜೆಪಿಯ ಮುಖಂಡರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆಗೆ ಸಂಬಂಧಪಟ್ಟ ಪರವಾನಗಿ ನವೀಕರಣವಾಗಿಲ್ಲ ಎಂಬ ಕಾರಣಕ್ಕಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಗೆ ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಸಹಮತಿಯ ಮೇರೆಗೆ ಕಾರ್ಯಾಚರಣೆ ಪದ್ಧತಿಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಅವಕಾಶ ಮಾಡಿಕೊಡುವಂತೆ ಆದೇಶಿಸಿದೆ. ಆದರೂ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಯತ್ನಾಳ್ ಧರಣಿ ನಡೆಸಿದ್ದಾರೆ.
ಮಂಗಳವಾರದಿಂದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅನುಮತಿಗಾಗಿ ಕಾದು ಕುಳಿತ ಯತ್ನಾಳ್ ಅವರಿಗೆ ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ ಬೆಲ್ಲದ್, ಶಾಸಕರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿದಂತೆ ಹಲವು ನಾಯಕರು ತೆರಳಿ ಬೆಂಬಲ ಸೂಚಿಸಿದರು. ಮಂಡಳಿಯಿಂದ ಅನುಮತಿ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಯತ್ನಾಳ್, ರೈತರ ಅನುಕೂಲಕ್ಕಾಗಿ ಹಾಗೂ 38 ಕೋಟಿ ರು. ಟೆಂಡರ್ ಒಪ್ಪಿಕೊಂಡು ಕಾರ್ಖಾನೆ ಆರಂಭಿಸಿದ್ದು, ಎಥೆನಾಲ್ ಉತ್ಪಾದನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣಕ್ಕಾಗಿ ಕಾರ್ಖಾನೆಗೆ ಬೀಗ ಹಾಕಿದೆ. ತಮಿಳುನಾಡಿನಲ್ಲಿ ಖಾಸಗಿ ಕಂಪನಿಯಲ್ಲಿ ನಿಯಮ ಉಲ್ಲಂಘಿಸಿದ್ದರೂ ಅವರಿಂದ ಕೋಟ್ಯಂತರ ರು. ಲಂಚ ಪಡೆದು ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದುಳಿದ ಜಿಲ್ಲೆಯಲ್ಲಿ ಕಾರ್ಖಾನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದು, ರೈತರ ಕಬ್ಬು ಅರೆಯಲು ದುರುದ್ದೇಶಪೂರಕವಾಗಿ ಅಡ್ಡಿಪಡಿಸಲಾಗುತ್ತಿದೆ ಎಂದು ಕಿಡಿಕಾರಿದರು.