ಫ್ಲೈಓವರ್‌ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ತಿಳಿದಿದೆ. ಆದರೆ, ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಬದಲಾಗುವುದಿಲ್ಲ. ಇನ್ನೂ ನಾಲ್ಕೈದು ತಿಂಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಹುಬ್ಬಳ್ಳಿ:

ನಗರದಲ್ಲಿ ಪ್ರಗತಿಯಲ್ಲಿ ಇರುವ ಫ್ಲೈಓವರ್‌ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸೋಮವಾರ ಇಲ್ಲಿನ ದೇಶಪಾಂಡೆ ನಗರದಿಂದ ಗೋಕುಲ ರಸ್ತೆಯ ವರೆಗೆ ನಡೆಯುತ್ತಿರುವ ಫ್ಲೈಓವರ್‌ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಕಾಲ್ನನಡಿಗೆಯ ಮೂಲಕ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ 15 ದಿನಗಳ ಹಿಂದೆ ಸಭೆ ನಡೆಸಿ ಕಾಮಗಾರಿ ಪೂರ್ಣಗೊಳಿಸಲು ವೇಳಾಪಟ್ಟಿ ರೂಪಿಸಲಾಗಿದೆ. ಅದರಂತೆ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಜೈ ಸಾಯಿ ಕ್ರಾಸ್‌ನಲ್ಲಿ ರಿಟೇನಿಂಗ್‌ ವಾಲ್‌, ದೇಸಾಯಿ ಸರ್ಕಲ್‌ ಹಾಗೂ ಎಲ್‌ಐಸಿ ಕಚೇರಿ ಭಾಗದಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮೇಲ್ಸೇತುವೆಯ ಮೇಲ್ಭಾಗದ ಬಹುತೇಕ ಕೆಲಸ ಮುಗಿದಿದ್ದು, ಫಿನಿಶಿಂಗ್‌ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಐಟಿ ಪಾರ್ಕ್‌ನಿಂದ ಹೊಸ ಬಸ್‌ ನಿಲ್ದಾಣದ ವರೆಗೆ ಎರಡೂ ಬದಿ ಸೇರಿ ಸುಮಾರು 3ರಿಂದ 3.5 ಕಿ.ಮೀ. ವರೆಗಿನ ಫ್ಲೈಓವರ್‌ನ ಕೆಳಭಾಗದ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಹೊಸೂರು ರಸ್ತೆ ಭಾಗದಲ್ಲಿ 10 ಗರ್ಡರ್‌ಗಳ ಪೈಕಿ 2 ಗರ್ಡರ್‌ಗಳ ಲಾಂಚ್‌ ಪೂರ್ಣಗೊಂಡಿದ್ದು, ಉಳಿದ 8 ಗರ್ಡರ್‌ಗಳನ್ನು ಶೀಘ್ರ ಲಾಂಚ್‌ ಮಾಡಲಾಗುವುದು ಎಂದು ಹೇಳಿದರು.

ನಾಲ್ಕೈದು ತಿಂಗಳು ಸಹಕರಿಸಿ:

ಫ್ಲೈಓವರ್‌ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ತಿಳಿದಿದೆ. ಆದರೆ, ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಬದಲಾಗುವುದಿಲ್ಲ. ಇನ್ನೂ ನಾಲ್ಕೈದು ತಿಂಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸತೀಶ ನಾಗನೂರ, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ.ಎನ್. ಪಾಟೀಲ, ಮುಖಂಡ ರವಿ ನಾಯಕ್, ಮುತ್ತು ಹೆಬ್ಬಳ್ಳಿ ಸೇರಿದಂತೆ ಹಲವರಿದ್ದರು.ಅಧಿಕಾರಿಗಳ ತರಾಟೆಗೆ

ಹಳೇ ಬಸ್‌ ನಿಲ್ದಾಣದ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಅವೌಜ್ಞಾನಿಕ ಚರಂಡಿ ಕಂಡು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಅಗಲಗೊಳಿಸಲು ಬೇಕಾದ ಜಾಗೆ ಇದ್ದರೂ ಸಹ ಅಲ್ಲಿ ರಸ್ತೆ ನಿರ್ಮಿಸದೇ ಫುಟ್‌ಪಾತ್‌ಗೆ ಹೆಚ್ಚಿನ ಜಾಗ ಬಿಟ್ಟಿರುವುದು ಸರಿಯಲ್ಲ. ಈ ಕೂಡಲೇ ಕೈಗೊಂಡಿರುವ ಚರಂಡಿ ಕಾಮಗಾರಿ ಕೈಬಿಟ್ಟು ಫುಟ್‌ಪಾತ್‌ಗೆ ಬೇಕಾದ ಜಾಗ ಬಿಟ್ಟು ಇನ್ನುಳಿದೆಡೆ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಫ್ಲೈಓವರ್‌ ಕಾಮಗಾರಿಯಿಂದ ರಸ್ತೆಗಳಲ್ಲಿ ಉಂಟಾಗಿರುವ ಸಣ್ಣ-ಪುಟ್ಟ ಗುಂಡಿಗಳನ್ನು ತಕ್ಷಣ ಸರಿಪಡಿಸುವಂತೆ ತಿಳಿಸಿದರು.