ಕುಕನೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನರ ಹೃದಯಸ್ಪರ್ಶಿ ವ್ಯಕ್ತಿ. ರಾಜ್ಯದ ಪ್ರತಿ ಮನೆಯಲ್ಲೂ ಯಡಿಯೂರಪ್ಪ ಯೋಜನೆಗಳ ಫಲಾನುಭವಿಗಳಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶನಿವಾರ ಚಿತ್ರದುರ್ಗದಲ್ಲಿ ಜರುಗಿದ ಬಿ.ಎಸ್.ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ತೆರಳಲು ಚಾಲನೆ ನೀಡಿದ ಅವರು, ಬಿ.ಎಸ್. ಯಡಿಯೂರಪ್ಪ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಲ್ಲಿ ಕಟ್ಟಿ ಬೆಳೆಸಿದರು. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಒಂದೂ ಸ್ಥಾನ ಇರಲಿಲ್ಲ. ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಮೊದಲಿಗೆ ಬಿಜೆಪಿ ಕಟ್ಟಿ ಬೆಳೆಸಿದರು. ಕೇವಲ ಎರಡು ಶಾಸಕ ಸ್ಥಾನ ಗೆದ್ದು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ಬಿಜೆಪಿ ಮಯವಾಗುವಂತೆ ಮಾಡಿ ಸಿಎಂ ಸ್ಥಾನ ಅಲಂಕರಿಸಿದರು. ರಾಜ್ಯದ ಜನತೆಗೆ ಜನಪರ ಯೋಜನೆ ನೀಡಿದರು. ಯಡಿಯೂರಪ್ಪನವರು ನೀಡಿದ ಬಜೆಟ್ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿರುವುದು ರಾಜ್ಯದ ಜನತೆಯ ಹೃದಯಲ್ಲಿ ಯಡಿಯೂರಪ್ಪ ಅವರಿಗೆ ಇರುವ ಗೌರವ ಹಾಗೂ ಅಭಿಮಾನದ ಸಂಕೇತ ಆಗಿದೆ. ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ ತಂದು ಬಡ ಕುಟುಂಬದ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಯೋಜನೆ ರೂಪಿಸಿದರು. ರೈತ ಬಂಧು ಮತ್ತು ಸಾಲ ಮನ್ನಾ ಯೋಜನೆಯಲ್ಲಿ ರೈತರ ಕಷ್ಟಕ್ಕೆ ಸ್ಪಂದಿಸಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಸಾಲ ಮನ್ನಾ ಸೌಲಭ್ಯ ನೀಡಿದರು.ಸೈಕಲ್ ವಿತರಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಒದಗಿಸುವ ಮೂಲಕ ಅವರಿಗೆ ನೆರಳಾದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ದೆಹಲಿ ಮಟ್ಟದಲ್ಲಿ ನಿಯೋಗ ಕರೆದೊಯ್ದು ಧರಣಿ ಹೂಡುವ ಎಚ್ಚರಿಕೆ ನೀಡಿ ಯಶಸ್ವಿಯಾದರು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರವೇಶ ದೊರೆಯುವುದಿಲ್ಲ ಎಂಬ ಸಂಶಯವಿತ್ತು. ಆದರೆ ಯಡಿಯೂರಪ್ಪ ಆ ಸಂಶಯ ಹುಸಿಗೊಳಿಸಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಿದ ಪವಾಡ ಮಾಡಿದರು. ಬಿಜೆಪಿ ಕೇವಲ ನಗರ ಕೇಂದ್ರಿತ ಅಥವಾ ಮಧ್ಯಮ ವರ್ಗದ ಪಕ್ಷವಾಗಿ ಉಳಿಸದೆ, ಅದನ್ನು ಬಡವರ, ದೀನದಲಿತರ ಮತ್ತು ಹಳ್ಳಿಗಳ ಪಕ್ಷವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ ವರ್ಷಕ್ಕೆ ಆರು ಸಾವಿರ ಸಮ್ಮಾನ್ ಹಣ ನೀಡಿದರು. ಯಡಿಯೂರಪ್ಪ ತಾವು ಸಹ ರಾಜ್ಯದ ಜನತೆಗೆ ನಾಲ್ಕು ಸಾವಿರ ನೀಡಲು ತೀರ್ಮಾನಿಸಿ ಹಣ ನೀಡಿದರು. ಆದರೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡುತ್ತಿದ್ದ ಹಣ ಕಿತ್ತುಕೊಂಡಿರುವುದು ರೈತ ಧೋರಣೆ ಸಂಕೇತ ಎಂದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.