ಯಡಿಯೂರಪ್ಪ, ಮಕ್ಕಳ ಕರ್ಮಕಾಂಡ ಸದ್ಯದಲ್ಲೇ ಬಯಲು: ಶಾಸಕ ಬೇಳೂರು ಗೋಪಾಲಕೃಷ್ಣ

| Published : Aug 31 2024, 01:35 AM IST

ಯಡಿಯೂರಪ್ಪ, ಮಕ್ಕಳ ಕರ್ಮಕಾಂಡ ಸದ್ಯದಲ್ಲೇ ಬಯಲು: ಶಾಸಕ ಬೇಳೂರು ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್‌ಗೆ ಹೆದರಿ ಮುಖ್ಯಮಂತ್ರಿ ರಾಜೀನಾಮೆ ನೀಡುವುದಿಲ್ಲ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕರ್ಮಕಾಂಡವನ್ನು ಸದ್ಯದಲ್ಲಿಯೇ ಬಯಲಿಗೆ ಎಳೆಯುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಅವರು ಆನಂದಪುರದಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿಯನ್ನು ಗುರುವಾರ ಸಂಜೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕ್ ಹುದ್ದೆ ಗಳ ನೇಮಕಾತಿ ಹಾಗೂ ಸಾಗರ ಸಾಯಿ ಗಾರ್ಮೆಂಟ್ಸ್‌ಗೆ ನೀಡಿದ 145 ಎಕರೆ ಭೂಮಿ ವಿಚಾರದಲ್ಲಿ ನಡೆದ ಅಕ್ರಮ ನಡೆದಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಅಕ್ರಮವನ್ನು ಶೀಘ್ರದಲ್ಲಿ ಬಯಲಿ ಗೆಳೆಯುತ್ತೇನೆ. ಅಲ್ಲದೆ, ಡಿಸಿಸಿ ಬ್ಯಾಂಕಿನ ಹಿಂದಿನ ಅವಧಿಯಲ್ಲಿ ಬ್ಯಾಂಕಿನ ವಿವಿಧ ಹುದ್ದೆಗಳ ನೇಮಕಾತಿಯ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅಕ್ರಮ ವೆಸಗಿರುವ ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸಭೆಯಲ್ಲಿ ಪ್ರಸ್ತಾಪ ಬಂದಿದ್ದು, ಅಕ್ರಮ ನಡೆಸಿದವರ ವಿರುದ್ಧ ದೂರು ದಾಖಲಿಸುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

ಸಾಗರ, ಹೊಸನಗರ ಕ್ಷೇತ್ರದ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಸಾಧಿಸಿದೆ. ಕಾರ್ಗಲ್ ಪಟ್ಟಣ ಪಂಚಾಯಿತಿ ಹಾಗೂ ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಸಹಕಾರದೊಂದಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷ ಇತಿಹಾಸ ಸೃಷ್ಟಿಸಿದೆ. ಶಿಮುಲ್‌ ಆಡಳಿತ ಮಂಡಳಿಯ ಅಧ್ಯಕ್ಷರ ಆಯ್ಕೆಯಲ್ಲಿ ಶಿವಮೊಗ್ಗ ,ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆಗಳಿಂದ 14 ಮಂದಿ ನಿರ್ದೇಶಕರಿದ್ದು, ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಎಲ್ಲಾ ಪಕ್ಷದವರನ್ನು ಒಂದುಗೂಡಿಸಿ ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಸಹಕಾರ ಸಂಘ ಹೀಗೆ ಇರಬೇಕು ಎಂದು ಸಂದೇಶ ನೀಡಿದ್ದೇವೆ. ಮುಂದೆ ನಡೆಯುವ ಸಾಗರ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್‌ಗೆ ಹೆದರಿ ಮುಖ್ಯಮಂತ್ರಿ ರಾಜೀನಾಮೆ ನೀಡುವುದಿಲ್ಲ ಕಾನೂನಾತ್ಮಕ ಹೋರಾಟ ನಡೆಸಲು 136 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬೆಂಬಲಕ್ಕೆ ಇದ್ದೇವೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಿತಾ ಕುಮಾರಿ, ಬಗರ್ ಹುಕುಂ ಸಮಿತಿಯ ಸದಸ್ಯ ರವಿಕುಮಾರ್ ದಾಸ್‌ಕೊಪ್ಪ, ಎನ್.ಉಮೇಶ್, ಮಂಜುನಾಥ್ ದಾಸನ್, ಗಜೇಂದ್ರ ಯಾದವ್, ರಹಮತ್‌ ಉಲ್ಲಾ, ಮಂಜು, ಈಶ್ವರ ,ನಾಗಪ್ಪ ಇತರರಿದ್ದರು.