ಮೈನವಿರೇಳಿಸಿದ ಯಲವಳ್ಳಿ ಹೋರಿ ಬೆದರಿಸುವ ಹಬ್ಬ

| Published : Nov 26 2023, 01:15 AM IST

ಸಾರಾಂಶ

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದ್ದನ್ನು ಜನರು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.ಹೋರಿ ಹಬ್ಬದ ಆಯೋಜಿಸಿದ್ದ ಯಲವಳ್ಳಿ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಬೇಲಿಯನ್ನು ನಿರ್ಮಿಸಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮೀಣ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿತು.

ದೀಪಾವಳಿ ನಂತರದಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓದುವುದನ್ನು ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನ್‌ರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ಮೈನವಿರೇಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.

ಅಖಾಡದಲ್ಲಿ ಚಿಕ್ಕನಂದಿಹಳ್ಳಿ ಚಾಮುಂಡಿ ಎಕ್ಸ್‌ಪ್ರೆಸ್‌, ಹಾರನಹಳ್ಳಿ ಸೃಷ್ಟಿಕರ್ತ ಛಾಯಾ ನಗರ, ಕಾತುವಳ್ಳಿ ಅಂಬಿಗರ ಹುಲಿ, ಹನುಮನಕೊಪ್ಪ ಡಾನ್, ಬೆಟ್ಟದಕೂರ್ಲಿ ಲಂಕಾಸುರ, ಅರಿಶಿಣಗೇರಿ ಗೂಳಿ, ಹೆಸರಿಯ ಚಿನ್ನಾಟದ ಚಿನ್ನ, ವೈಭವ ಶಿವಮೊಗ್ಗದ ಮಹಾರಾಜ, ವಿಷ್ಣುದಾದಾ, ಕೊಡಕಣಿ ಡಾನ್, ತ್ಯಾಗರ್ತಿ ದರ್ಬಾರ್, ಸೊರಬದ ಸೂಪರ್ ಸ್ಟಾರ್, ಹಂಟರ್, ನಗುಮುಖದ ಕಳಸ, ವರದಾ ಚಿನ್ನಾ ಸೇರಿದಂತೆ ಯಲವಳ್ಳಿಯ ಜಮೀನ್ದಾರ್‌ನ ಏಕಲವ್ಯ, ಯಜಮಾನ ಪಾಳೆಗಾರ, ಕಲ್ಲೇಶ, ಜೆ.ಪಿ.ಗೌಡ್ರು ದರ್ಬಾರ್, ಅನಾಹುತ, ಹೋರಿ ಮಂಚಪ್ಪ, ಕ್ರಾಂತಿವೀರ, ಯಲವಳ್ಳಿ ಕಿಂಗ್, ಡಿ.ಜೆ. ದರ್ಬಾರ್, ನಾಗಪ್ಪ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ ಓಡಿದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದ್ದನ್ನು ಜನರು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.

ಹೋರಿ ಹಬ್ಬದ ಆಯೋಜಿಸಿದ್ದ ಯಲವಳ್ಳಿ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಬೇಲಿಯನ್ನು ನಿರ್ಮಿಸಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

- - - ಕೋಟ್ 25 ವರ್ಷದಿಂದ ಹಬ್ಬ ಆಚರಿಸುತ್ತಿದ್ದೇವೆ. ಹೋರಿಯನ್ನು ಪ್ರೀತಿಯಿಂದ ಸಾಕುತ್ತೇವೆ. ಹಬ್ಬದಲ್ಲಿ ಹೋರಿಯೊಂದಿಗೆ ನಾವೂ ಸಹ ಸಂಭ್ರಮಿಸುತ್ತೇವೆ

- ಹನುಮಂತಪ್ಪ, ಮಾಲೀಕ, ಹಾರನಹಳ್ಳಿ ಹೋರಿ

- - - -25ಕೆಪಿಸೊರಬ01:

ಸೊರಬ ತಾಲೂಕಿನ ಯಲವಳ್ಳಿಯಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದೇ ಓಡುತ್ತಿರುವ ಹೋರಿ.