ಸ್ವಚ್ಛತೆ, ಪಾರ್ಕಿಂಗ್, ಬಂದೋಬಸ್ತ್, 9 ದಿನಗಳ ಜಾತ್ರೆ ಸುಸೂತ್ರ
ಶಂಕರ ಭಟ್ಟ ತಾರೀಮಕ್ಕಿಕನ್ನಡಪ್ರಭ ವಾರ್ತೆ ಯಲ್ಲಾಪುರ
ಮೂರು ವರ್ಷಗಳಿಗೊಮ್ಮೆ ನಡೆಯುವ ಒಂಬತ್ತು ದಿನಗಳ ಗ್ರಾಮದೇವಿಯರ ಜಾತ್ರೆ ಯಾವುದೇ ಅಹಿತಕರ ಘಟನೆ, ಹೇಳುವಂತಹ ಲೋಪಗಳು ಇಲ್ಲದೇ ವ್ಯವಸ್ಥಿತವಾಗಿ ಸಂಪನ್ನಗೊಂಡ ಬಗ್ಗೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ತಾಲೂಕಿನ ಇತಿಹಾಸದಲ್ಲೆ ಇಷ್ಟು ವ್ಯವಸ್ಥಿತವಾಗಿ ಜಾತ್ರೆ ನಡೆದಿಲ್ಲ ಎನ್ನುವ ಅಭಿಪ್ರಾಯ ಅನೇಕ ಹಿರಿಯರಿಂದಲೂ ಶ್ಲಾಘನೆಗೊಳಪಟ್ಟಿದೆ.ಜಾತ್ರೆಗೆ ಒಂದು ತಿಂಗಳಿಂದಲೇ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು. ಅಲ್ಲದೇ ಜಾತ್ರೆಯ ಮುಖ್ಯ ರಸ್ತೆಗಳ ವ್ಯವಸ್ಥಿತವಾಗಿ ನಿರ್ಮಾಣ, ಲಘು ವಾಹನಗಳಿಗೆ ನಿಸರ್ಗಮನೆ ಮೂಲಕ ಸಂಚಾರ, ಈ ಎಲ್ಲ ಕಾರ್ಯಗಳನ್ನು ಮಾಡಿದ ಪರಿಣಾಮ ಜಾತ್ರೆಗೆ ಯಶಸ್ಸು ಲಭಿಸಿದೆ. ಅದರಲ್ಲೂ ಅತ್ಯಂತ ಹೆಚ್ಚು ಜನ ಸೇರಿದಾಗ ಕಳ್ಳತನ, ಪಿಕ್ ಪಾಕೆಟಿಂಗ್ ಮತ್ತು ಯಾವುದೇ ಅವಘಡ ಸಂಭವಿಸದೇ ಸುಸೂತ್ರವಾಗಿ ಸಂಪನ್ನಗೊಂಡಿದೆ.
ಜಾತ್ರೆಯ ಅವಧಿಯಲ್ಲಿ ಅಂಗಡಿಗಳಲ್ಲಿ ಹೇಳುವಂತಹ ವ್ಯಾಪಾರವಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇತ್ತು. ಆದರೆ ಶನಿವಾರದ ಸಂಜೆ ವರೆಗೂ ಹಲವು ಅಂಗಡಿಗಳು ರಸ್ತೆ ಪಕ್ಕದಲ್ಲಿ ಇದ್ದು, ಕೊನೆಯ ಕ್ಷಣದಲ್ಲಿ ಜಾತ್ರಾ ಅಂಗಡಿಗಳಲ್ಲಿ ವಸ್ತುಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿರುವುದು, ಅಂಗಡಿ ಪ್ಯಾಕಪ್ ಮಾಡುವ ಅವಸರದಲ್ಲಿ ಕಡಿಮೆ ದರದಲ್ಲಿ ಸಿಗಬಹುದೆಂದು ಚೌಕಾಸಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂತು.
ಸಂಭ್ರಮ ಕ್ರಾಸಿನಿಂದ ಸಬಗೇರಿ ವರೆಗೆ ೯ ದಿನಗಳ ಕಾಲ ಬಂದ್ ಆಗಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಸಂಚಾರ ಆರಂಭಿಸಲು ಪಿಎಸ್‌ಐಗಳಾದ ರಾಜಶೇಖರ ವಂದಲಿ ಮತ್ತು ಸಿದ್ದು ಗುಡಿ ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿಯಲ್ಲಿದ್ದ ಕಮಾನು, ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.
ಪಟ್ಟಣದ ಮಧ್ಯದಲ್ಲೇ ಹೆದ್ದಾರಿ ಹಾದು ಹೋಗಿದ್ದು, ಜಾತ್ರಾ ಅವಧಿಯಲ್ಲಿ ಸಂಚಾರ ವ್ಯವಸ್ಥೆ ನಿರ್ವಹಣೆ ಪೊಲೀಸರಿಗೆ ಸವಾಲೇ ಆಗಿತ್ತು. ಇಲಾಖೆ ಸಮರ್ಪಕವಾದ ಕಾರ್ಯ ಯೋಜನೆ ರೂಪಿಸಿದ ಕಾರಣ ಸಂಚಾರ ಸುಗಮವಾಯಿತು. ವಿವಿಧೆಡೆಗಳಿಂದ ಬಂದೋಬಸ್ತ್‌ಗೆ ಬಂದ ಹೆಚ್ಚುವರಿ ಎಸ್.ಪಿ. ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗೀತಾ ಪಾಟೀಲ್ ನಿರ್ದೇಶನದಲ್ಲಿ ೩ ಪಿಐಗಳು, ೧೪ ಪಿಎಸ್‌ಐಗಳು, ೩೧೪ ಪಿಸಿಗಳು ಅಲ್ಲದೇ ೨೧ ಮಹಿಳಾ ಕಮಾಂಡೋ ಪಡೆ, ಒಟ್ಟೂ ೩೫೨ಕ್ಕೂ ಹೆಚ್ಚು ಸಿಬ್ಬಂದಿ ಸಂಚಾರ ನಿಯಂತ್ರಣವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಜೂಜು ಕಂಡುಬಂದ ತಕ್ಷಣ ನಿರ್ಬಂಧಿಸಿ, ಜನರ ಜೇಜು ರಕ್ಷಿಸಿದ್ದಾರೆ.ಪಾರ್ಕಿಂಗ್‌ಗೂ ಸಾಕಷ್ಟು ವ್ಯವಸ್ಥೆ ಕಲ್ಪಿಸಿ, ಸ್ಥಳಗಳನ್ನು ನಿಗದಿಪಡಿಸಿದ ಪೊಲೀಸರು, ಆ ಬಗ್ಗೆ ಮೊದಲೇ ಸೂಕ್ತ ಮಾಹಿತಿ ನೀಡಿ, ಜಾಗೃತಿ ಮೂಡಿಸಿದ್ದರು. ಪಾರ್ಕಿಂಗ್ ಮಾಹಿತಿಯುಳ್ಳ ಕ್ಯುಆರ್ ಕೋಡ್ ಕೂಡ ಸಿದ್ಧಪಡಿಸಿ ಜನರಿಗೆ ಅನುಕೂಲ ಕಲ್ಪಿಸಿದ್ದರು. ಹಾಗಾಗಿ ಪಾರ್ಕಿಂಗ್ ವ್ಯವಸ್ಥೆಯಲ್ಲೂ ಯಾವುದೇ ವ್ಯತ್ಯಯವಾಗಲಿಲ್ಲ. ಕೆಲವೆಡೆ ರಸ್ತೆ ಪಕ್ಕ ಎಲ್ಲೆಂದರಲ್ಲಿ ನಿಲ್ಲಿಸಿದ ವಾಹನಗಳ ಟೋಯಿಂಗ್ ಮಾಡಿದ ವಿಚಾರ ಮೊದಲೆರಡು ದಿನ ಅಸಮಾಧಾನಕ್ಕೆ ಕಾರಣವಾದರೂ, ಆನಂತರ ಜನ ಎಚ್ಚೆತ್ತುಕೊಂಡು ಸಹಕರಿಸಿದ್ದಾರೆ.
ಜಾತ್ರಾ ಮಂಟಪದಲ್ಲೂ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿರುವುದು ಜನರ ಶ್ಲಾಘನೆಗೆ ಪಾತ್ರವಾಗಿದೆ. ಸೇವೆಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೀರು, ಫ್ಯಾನ್ ಇತ್ಯಾದಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೂಜೆ, ಹಣ್ಣುಕಾಯಿ, ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು, ಹೊರ ಊರಿನಿಂದ ಅಥವಾ ಸ್ಥಳೀಯ ಗಣ್ಯರಿಗೆ ಮತ್ತು ವಿಶೇಷ ಪಾವತಿ ಮಾಡಿದವರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿ.ವಿ. ಜೋಶಿ ನೇತೃತ್ವದಲ್ಲಿ ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.ಸಮರ್ಪಕ ಕಸ ವಿಲೇವಾರಿ:
ಜಾತ್ರೆಯ ಒಂಬತ್ತು ದಿವಸಗಳ ಕಾಲ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ತುಂಬಾ ಶ್ರಮ ವಹಿಸಿದ್ದಾರೆ. ಬೆಳಗಿನ ಜಾವ ೩ ಗಂಟೆಯಿಂದ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಭಕ್ತರು ೬ ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಅದಕ್ಕೂ ಮೊದಲೇ ಕಸ ವಿಲೇವಾರಿ ಮಾಡಿದರು. ಇದರಿಂದ ಪಪಂ ಅಧಿಕಾರಿಗಳ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.ಜಾತ್ರೆಯಲ್ಲಿ ಅಂಗಡಿ ಹರಾಜು ಬಗ್ಗೆ ವ್ಯಾಪಾರಸ್ಥರಿಂದ ಅಸಮಾಧಾನ ವ್ಯಕ್ತವಾಗಿತ್ತು. ಇನ್ನು ಮುಂದೆ ಪಪಂದವರು ಹರಾಜು ಮಾಡುವಾಗ ಅಂಗಡಿ ಹಾಕುವವರೇ ಟೆಂಡರ್ ಪಡೆಯಬೇಕು ಮತ್ತು ಒಬ್ಬರಿಗೇ ೧-೨ ಅಂಗಡಿಗಳು ಮಾತ್ರ ನೀಡುವ ವ್ಯವಸ್ಥೆ ಜಾರಿಗೆ ಬಂದರೆ ಅಂಗಡಿಕಾರರಿಗೆ ಮೋಸವಾಗದಂತೆ ನೋಡಿಕೊಳ್ಳಬಹುದು ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.