ಸಾರಾಂಶ
ಬೆಂಗಳೂರು : ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಕಳೆದ ವಾರ ಒಂದೆರಡು ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಒಳನಾಡು ಭಾಗದಲ್ಲಿ ಅಷ್ಟೊಂದು ಮಳೆಯಾಗಿಲ್ಲ. ಇದೀಗ ಮುಂದಿನ ಎರಡು ದಿನ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗದಲ್ಲಿ 6 ರಿಂದ 15 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಹೀಗಾಗಿ, ಜು.1 ಹಾಗೂ 2ರಂದು ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.ಉಳಿದಂತೆ ರಾಜ್ಯದಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಗಾಳಿ ಬೀಸುವ ಸಾಧ್ಯತೆ ಇದೆ. ಇನ್ನು ಕರಾವಳಿ ತೀರದಲ್ಲಿ ಬೀರು ಗಾಳಿಯು 35 ರಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಕಡಲ ತೀರದಲ್ಲಿ ಮನೋರಂಜನಾ ಕಾರ್ಯಕ್ರಮ ಆಯೋಜಿಸದಂತೆ ಸೂಚಿಸಲಾಗಿದೆ.ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಶಿವಮೊಗ್ಗದ ಆಗೊಂಬೆ ಹಾಗೂ ಚಿಕ್ಕಮಗಳೂರಿನ ಕೊಟ್ಟಿಗೇಹಾರದಲ್ಲಿ ಅತಿ ಹೆಚ್ಚು 9 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 7, ಸಿದ್ದಾಪುರ, ಕಾರ್ಕಳದಲ್ಲಿ ತಲಾ 6, ಕದ್ರಾ, ಕುಂದಾಪುರ, ಗೇರಸೊಪ್ಪು, ಭಾಗಮಂಡಲದಲ್ಲಿ ತಲಾ 5, ಕೋಟ, ಯಲ್ಲಾಪುರ, ಹೊನ್ನಾವರ ಸೇರಿದಂತೆ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.