ನರಗುಂದ ತಾಲೂಕಿನಲ್ಲಿ ನಿರಂತರ ಮಳೆಯಿಂದ ಹೆಸರು ಬೆಳೆಗೆ ಹಳದಿ ರೋಗ

| Published : Aug 02 2025, 12:15 AM IST

ನರಗುಂದ ತಾಲೂಕಿನಲ್ಲಿ ನಿರಂತರ ಮಳೆಯಿಂದ ಹೆಸರು ಬೆಳೆಗೆ ಹಳದಿ ರೋಗ
Share this Article
  • FB
  • TW
  • Linkdin
  • Email

ಸಾರಾಂಶ

ಜುಲೈ ತಿಂಗಳಲ್ಲಿ ನಿರಂತರ 20 ದಿನ ಮಳೆಯಾಗಿದ್ದರಿಂದ ತೇವಾಂಶ ಹೆಚ್ಚಾಗಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಜುಲೈ ತಿಂಗಳಲ್ಲಿ ನಿರಂತರ 20 ದಿನ ಮಳೆಯಾಗಿದ್ದರಿಂದ ತೇವಾಂಶ ಹೆಚ್ಚಾಗಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.

ತಾಲೂಕಿನಲ್ಲಿ ಕೃಷಿ ಅವಲಂಬಿಸಿದ ಕುಟುಂಬಗಳೇ ಹೆಚ್ಚಿವೆ. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಈಗ ರೋಗ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿದ್ದಾರೆ.

ಕಳೆದ 20 ದಿನಗಳಿಂದ ಮಳೆ ಬಿಡುವು ನೀಡಿಲ್ಲ. ತಂಪಾದ ವಾತಾವರಣವಿದೆ. ಬೆಳೆಗೆ ಬಿಸಿಲು ಬಿದ್ದೇ ಇಲ್ಲ. ಹೀಗಾಗಿ ಹೆಸರು ಗಿಡಗಳಿಗೆ ಹಳದಿ ರೋಗದ ಜತೆಗೆ ತುಕ್ಕು ರೋಗ ಕಾಣಿಸಿಕೊಂಡಿದೆ. ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ.

ಮುಂಗಾರು ಪೂರ್ವ ಮಳೆಯಿಂದ ರೈತರು ಖುಷಿಗೊಂಡಿದ್ದರು. ಬಿತ್ತನೆ ಬಳಿಕ ಸಕಾಲಕ್ಕೆ ಮಳೆಯಾಗಿದೆ. ಆದರೆ ಈಗ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ.

ರೈತರು ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದು, ಬೆಳೆ ಕಾಯಿ (ಬುಡ್ಡಿ) ಹಿಡಿಯುವ ಹಂತದಲ್ಲಿ ತೊಂದರೆಗೆ ಸಿಲುಕಿದೆ. ಎಲೆ ಮುದುರಿ ಕಪ್ಪಾಗಿದ್ದರಿಂದ ರೈತ ಉತ್ತಮ ಇಳುವರಿ ಆಸೆ ಕೈಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತ ಭೂಮಿ ಹದಗೊಳಿಸುವುದರಿಂದ ಹಿಡಿದು ಬೆಳೆ ಬರುವ ವರೆಗೆ ಒಂದು ಎಕರೆಗೆ ₹10ರಿಂದ ₹15 ಸಾವಿರ ಖರ್ಚು ಮಾಡುತ್ತಾರೆ. ಆದರೆ ಈಗಿನ ವಾತಾವರಣ ಮತ್ತು ಸತತ ಮಳೆಯಿಂದ ಬಿತ್ತಿದ್ದ ಬೀಜದ ಹಣ ಬಂದರೆ ಸಾಕು ಎನ್ನುತ್ತಿದ್ದಾರೆ.

ಬಿತ್ತನೆ ವಿವರ: ತಾಲೂಕಿನ ರೈತರು ಈ ವರ್ಷ 18,050 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ರೈತರು ಪ್ರತಿ ಎಕರೆಗೆ ₹15 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಅತಿಯಾದ ಮಳೆಯಿಂದ ಸದ್ಯ ಅಪಾರ ಹಾನಿ ಅನುಭವಿಸುತ್ತಿದ್ದಾರೆ. ಸರ್ಕಾರ ಪ್ರತಿ 1 ಎಕರೆಗೆ ₹ 50 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು. 20 ದಿನಗಳಲ್ಲಿ ಬೆಳೆ ವಿಮೆ ಕಂಪನಿಯವರು ಹೆಸರು ಬೆಳೆ ಹಾನಿ ಪರಿಹಾರ ರೈತರ ಬ್ಯಾಂಕ್‌ ಖಾತೆಗೆ ಹಾಕಬೇಕು ಎಂದು ತಾಲೂಕು ಕರ್ನಾಟಕ ರೈತ ಸೇನೆ ಅಧ್ಯಕ್ಷ ವೀರಣ್ಣ ಸೋಪ್ಪನ ಹೇಳಿದರು.

ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿದು ಹೆಸರು ಬೆಳೆಗೆ ಹಳದಿ ಮತ್ತು ತುಕ್ಕು ರೋಗ ಹಿಡಿದು ಹೆಸರು ಬೆಳೆ ಹಾನಿಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ. ಕುಲಕರ್ಣಿ ಹೇಳಿದರು.