ಸಾರಾಂಶ
ಪಾಚಿಗಟ್ಟಿ, ದುರ್ವಾಸನೆಯಿಂದ ಕೂಡಿರುವ ನೀರು । ಸಾರ್ವಜನಿಕರ ಆಕ್ರೋಶಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೊಪ್ಪಳ ನಗರದಲ್ಲಿ ಪೂರೈಕೆಯಾಗುತ್ತಿರುವ ನಲ್ಲಿ ನೀರು ಹಳದಿಯಾಗಿದ್ದು, ರಾಡಿಯಂತೆ ಬರುತ್ತದೆ. ಕುಡಿಯಲು ಯೋಗ್ಯವಲ್ಲದಂತೆ ಇದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರು ಪಾಚಿಗಟ್ಟಿದ್ದು, ಹಳದಿಯಾಗಿದೆ ಮತ್ತು ದುರ್ವಾಸನೆಯಿಂದ ಕೂಡಿದೆ. ಹೀಗಾಗಿ, ಸಾರ್ವನಿಕರು ಇದನ್ನು ಕುಡಿಯುವುದಾದರೂ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ತುಂಗಭದ್ರಾ ನದಿಯಿಂದ ಪೂರೈಕೆಯಾಗುವ ನೀರು ಸರಿಯಾಗಿ ಫಿಲ್ಟರ್ ಆಗುತ್ತಿಲ್ಲ ಮತ್ತು ತುಂಗಭದ್ರಾ ನದಿಯಲ್ಲಿಯೂ ನೀರು ತೀರಾ ಕಮ್ಮಿಯಾಗಿರುವುದರಿಂದ ಹಸಿರುಗಟ್ಟಿದ್ದು, ಅಲ್ಲಿಯೂ ವಾಸನೆ ಬರುತ್ತಿದೆ. ಅದೇ ನೀರನ್ನೇ ಶುದ್ಧೀಕರಿಸಿ ಬೀಡಲಾಗುತ್ತದೆಯಾದರೂ ಅದು ಸಂಪೂರ್ಣ ಶುದ್ಧೀಕರಣವಾಗುತ್ತಿಲ್ಲ. ಹೀಗಾಗಿ, ನಲ್ಲಿಯಲ್ಲಿ ನೀರು ಬಂತೆಂದು ತುಂಬಿಕೊಳ್ಳಲು ಹೋದರೆ ವಾಸನೆ ಬರುತ್ತದೆ. ಅಷ್ಟೇ ಅಲ್ಲ ನೀರನ್ನು ಕುಡಿಯಲು ಆಗುತ್ತಿಲ್ಲ ಎಂದು ಸಾರ್ವನಿಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಲ್ಲಿಯಲ್ಲಿ ನೀರು ಬರುವುದೇ ಅಪರೂಪಕ್ಕೊಮ್ಮೆ ಎನ್ನುವಂತೆ ಆಗಿದೆ. ಬೇಸಿಗೆ ಬಂದಾಗಿನಿಂದ ನೀರು ನಾಲ್ಕಾರು ದಿನಗಳಿಗೊಮ್ಮೆ ಪೂರೈಕೆಯಾಗುತ್ತದೆ. ಬರುವ ನೀರು ಕುಡಿಯುಲು ಅಲ್ಲ, ಸ್ನಾನಕ್ಕೂ ಯೋಗ್ಯ ಇಲ್ಲ. ದುರ್ವಾಸನೆಯಿಂದ ಕೂಡಿದ ನೀರು ಪೂರೈಕೆ ಮಾಡಲಾಗುತ್ತದೆ. ಇಂಥ ನೀರನ್ನು ಪೂರೈಕೆ ಮಾಡುವುದರಿಂದ ನಾನಾ ರೋಗಗಳಿಗೆ ದಾರಿಯಾಗುತ್ತದೆ.ನೀರನ್ನು ಶುದ್ಧೀಕರಿಸಿಯಾದರೂ ಬಿಡಿ, ಇಲ್ಲ ಬೇರೆ ನೀರನ್ನಾದರೂ ಪೂರೈಕೆ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ:ನಲ್ಲಿಯಲ್ಲಿ ಬರುವ ನೀರನ್ನು ಬಕೆಟ್ ಮತ್ತು ಬಾಟಲ್‌ನಲ್ಲಿ ಹಾಕಿ, ಫೋಟೋ ತೆಗೆದು, ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಫ್ಲೋಡ್ ಮಾಡುತ್ತಿದ್ದಾರೆ. ಕೊಪ್ಪಳ ನಗರದಲ್ಲಿ ಪೂರೈಕೆಯಾಗುತ್ತಿರುವ ನೀರು ಈ ರೀತಿ ಇದ್ದು, ಇವುಗಳನ್ನು ಕುಡಿಯುವುದಾದರೂ ಹೇಗೆ ಎಂದು ಕಿಡಿಕಾರಿದ್ದಾರೆ.
ಕೆಲವರಂತೂ ಈ ನೀರು ಕುಡಿಯಲು ಅಲ್ಲ, ಸ್ನಾನಕ್ಕೂ ಯೋಗ್ಯವಿಲ್ಲ. ಆದರೂ ನಗರಸಭೆಯವರು ಕಣ್ಣು ತೆರೆದು ನೋಡುತ್ತಿಲ್ಲ. ದುರ್ವಾಸನೆಯುಕ್ತ ನೀರು ಬರುತ್ತಿದ್ದರೂ ಅದನ್ನು ಪರೀಕ್ಷೆಗೊಳಪಡಿಸುತ್ತಿಲ್ಲ. ನಗರಸಭೆಯ ನಿರ್ಲಕ್ಷ್ಯದಿಂದ ಜನರು ನಾನಾ ರೋಗಕ್ಕೆ ತುತ್ತಾಗುವಂತೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊಪ್ಪಳ ಮತ್ತು ಭಾಗ್ಯನಗರಗಳಿಗೆ ಇದೇ ನೀರನ್ನೇ ಪೂರೈಕೆ ಮಾಡಲಾಗುತ್ತದೆ. ತುಂಗಭದ್ರಾ ನದಿಯಿಂದ ಜಾಕ್ ವೆಲ್‌ನಿಂದ ಪೂರೈಕೆಯಾಗುತ್ತಿರುವ ನದಿಯ ನೀರೇ ಹಾಗೆ ಇದೆ. ಆದರೂ ಪೂರೈಕೆ ಮಾಡುತ್ತಿರುವುದಾದರೂ ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಕೊಪ್ಪಳ ನಗರದಲ್ಲಿ ಪೂರೈಕೆಯಾಗುತ್ತಿರುವ ನೀರು ಸರಿಯಾಗಿಲ್ಲ ಎನ್ನುವ ಕುರಿತು ದೂರು ಬಂದಿವೆ. ಕೆಲವೊಂದು ಕಡೆ ಮಾತ್ರ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಲು ಸೂಚಿಸಲಾಗಿದೆ. ನಗರಾದ್ಯಂತ ಹಾಗೇನು ಇಲ್ಲ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ತಿಳಿಸಿದ್ದಾರೆ.ತುಂಗಭದ್ರಾ ನದಿಯಿಂದ ಕೊಪ್ಪಳ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ನದಿಯಲ್ಲಿಯೂ ನೀರಿಲ್ಲದೆ ಇರುವ ಅಲ್ಪಸ್ವಲ್ಪ ನೀರು ಕೊಳೆತು ಹೋಗಿದೆ. ಅವುಗಳನ್ನು ಶುದ್ಧೀಕರಿಸಿ ಬಿಡುತ್ತಿದ್ದಾರೆಯಾದರೂ ಅವುಗಳು ಶುದ್ಧೀಕರಣವಾಗುತ್ತಲೇ ಇಲ್ಲ. ಹಳದಿ ಬಣ್ಣ ಮತ್ತು ದುರ್ವಾಸನೆಯಿಂದ ಕೂಡಿದ ನೀರೇ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮೊಹ್ಮದ್ ಕಿರ್ಮಾನಿ.