ವಿಜೃಂಭಣೆಯಿಂದ ನಡೆದ ಎಣ್ಣೆಹೊಳೆ ಮಹದೇಶ್ವರಸ್ವಾಮಿ ಜಾತ್ರಾಮಹೋತ್ಸವ

| Published : Nov 13 2025, 12:30 AM IST

ಸಾರಾಂಶ

11 ರಂದು ಬೆಳಗ್ಗೆ 6ಗಂಟೆಗೆ ನಂದಿವಾಹನ, ಕಾಮಧೇನು, ಬಸವ, ಕುದುರೆ ವಾಹನ, ಹುಲಿವಾಹನ ಉತ್ಸವ, ಆನೆ ವಾಹನ ಉತ್ಸವ ಜರುಗಿದವು.

ಚಾಮರಾಜನಗರ: ತಾಲೂಕಿನ‌‌ ಬಡಗಲಪುರ‌ ಸಮೀಪದ‌ ಎಣ್ಣೆಹೊಳೆ‌‌ ಮಹದೇಶ್ವರಸ್ವಾಮಿ‌‌ಯ 3ನೇ ಕಾರ್ತಿಕ ಮಾಸದ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು. ನ.10 ರಂದು ರಾತ್ರಿ 12 ಗಂಟೆಗೆ ಚಿಕ್ಕೆಂಪಿಹುಂಡಿ, ಬಡಗಲಪುರ, ಅಮಚವಾಡಿ, ಕಟ್ನವಾಡಿ, ಎಣ್ಣೆಹೊಳೆ ಮಹದೇಶ್ವರ ಕಾಲೋನಿ, ಮೂಡ್ಲುಪುರ, ಮಲ್ಲಯ್ಯನಪುರ,‌ಉಗನೇದಹುಂಡಿ, ನರಸಮಂಗಲ, ಹೊನ್ನಹಳ್ಳಿ ಗ್ರಾಮಗಳ ಹಾಲು ಮತ , ದಲಿತ ಸಮುದಾಯದವರಿಂದ ತಮಟೆ ಓಲಗ. ಮಂಗಳವಾದ್ಯ ನಂದಿಧ್ವಜದೊಂದಿಗೆ ವೀರಮಕ್ಕಳ ಕುಣಿತ, ಬೇಡರ ವೇಷ ಕುಣಿತ, ಹುಲಿ ವೇಷ ಕುಣಿತ, ನಾಯಕ ಹಾಗೂ ಉಪ್ಪಾರ ಸಂಘದಿಂದ ಗೊಂಬೆ, ಪಲ್ಲಕ್ಕಿ ಉತ್ಸವ ಮತ್ತು ನಂದಿ ವಾಹನ ಉತ್ಸವ, ದೀವಟಿಗೆ ಸೇವೆ, ಪಂಜಿನ ಸೇವೆ ನಡೆದವು. ಹಾಗೆಯೇ 11 ರಂದು ಬೆಳಗ್ಗೆ 6ಗಂಟೆಗೆ ನಂದಿವಾಹನ, ಕಾಮಧೇನು, ಬಸವ, ಕುದುರೆ ವಾಹನ, ಹುಲಿವಾಹನ ಉತ್ಸವ, ಆನೆ ವಾಹನ ಉತ್ಸವ ಜರುಗಿದವು. ಅಂದು ಬೆಳಗ್ಗೆ 7ಗಂಟೆಗೆ ಮಹದೇಶ್ವರ ಮಹಾರಥೋತ್ಸವವು ವಿವಿಧ ಕಲಾತಂಡಗಳ ಜತೆ‌‌ ವಿಜೃಂಭಣೆಯಿಂದ ನೆರವೇರಿತು. ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಜಾತ್ರೆ ಯಶಸ್ವಿಯಾಗಿ ನಡೆದಿದ್ದಕ್ಕಾಗಿ ಧರ್ಮದರ್ಶಿ ಬಾಲಚಂದ್ರ ಮೂರ್ತಿ, ಪ್ರಧಾನ ಅರ್ಚಕ ನಾಗಮಲ್ಲಪ್ಪ ಮತ್ತು ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ.