ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಲವು ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಅಡೆತಡೆಗಳಿಂದ ಸ್ಥಗಿತಗೊಂಡಿದ್ದ ಎತ್ತಿನಹೊಳೆ ಯೋಜನೆಗೆ ಇದೀಗ ಮಹತ್ವದ ತಿರುವು ಸಿಕ್ಕಿದ್ದು, ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಲಭಿಸಿದ ಹಿನ್ನೆಲೆಯಲ್ಲಿ ಕಾಮಗಾರಿಗಳು ಪುನಾರಂಭಗೊಂಡಿವೆ. ಈ ಬೆಳವಣಿಗೆ ಬಯಲು ಸೀಮೆ ಅರಸೀಕೆರೆ ತಾಲೂಕು ಸೇರಿದಂತೆ ಮಧ್ಯ ಕರ್ನಾಟಕದ ಹತ್ತಾರು ಜಿಲ್ಲೆಗಳ ಜನತೆಗೆ ಕುಡಿಯುವ ನೀರಿನ ಭರವಸೆ ಮೂಡಿಸಿದೆ.ಅನುಮತಿ ಸಿಗುತ್ತಿದ್ದಂತೆಯೇ ಶಾಸಕ ಕೆ.ಎಂ. ಶಿವಲಿಂಗೇಗೌಡರು ಚುರುಕಾಗಿ ಕಾರ್ಯನಿರ್ವಹಿಸಿ, ತಾಲೂಕಿನ ನಾಗೇನಹಳ್ಳಿ ಸಮೀಪದ ರಂಗನಾಥಸ್ವಾಮಿ ದೇವಾಲಯದ ಬಳಿಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಜೀವನಾಡಿಯಾಗಿರುವ ಎತ್ತಿನಹೊಳೆ ಯೋಜನೆ ಅನೇಕ ಅಡೆತಡೆಗಳು, ಕಾನೂನು ತೊಡಕುಗಳು ಮತ್ತು ಆಡಳಿತಾತ್ಮಕ ಸವಾಲುಗಳನ್ನು ಮೀರಿ ಇಂದು ಮಹತ್ವದ ಹಂತಕ್ಕೆ ತಲುಪಿದೆ. ಈ ಯೋಜನೆ ಕೇವಲ ನೀರು ತರಿಸುವ ಕಾಮಗಾರಿಯಲ್ಲ, ಇದು ಬಯಲು ಸೀಮೆಯ ಜನರ ಬದುಕಿಗೆ ಹೊಸ ದಿಕ್ಕು ತೋರಿಸುವ ಮಹತ್ತರ ಪ್ರಯತ್ನವಾಗಿದೆ. ವರ್ಷಗಳ ಕಾಲ ಕುಡಿಯುವ ನೀರಿಗೂ ಸಂಕಷ್ಟ ಅನುಭವಿಸಿದ್ದ ತಾಲೂಕಿನ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಾವು ಹೋರಾಟ ನಡೆಸಿದ್ದೇವೆ. ಸರ್ಕಾರದ ವಿವಿಧ ಹಂತಗಳಲ್ಲಿ ನಿರಂತರವಾಗಿ ಮನವಿ ಮಾಡಿದ್ದು, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದು, ನಮ್ಮ ಎಲ್ಲಾ ಹೋರಾಟದ ಫಲವಾಗಿ ಇಂದು ಈ ಹಂತಕ್ಕೆ ಕಾಮಗಾರಿ ಬಂದು ನಿಂತಿದೆ. ಇನ್ನು ಕೆಲವೇ ದಿನಗಳಲ್ಲಿ ತಾಲೂಕಿನ ಕೆರೆ-ಕಟ್ಟೆಗಳಲ್ಲಿ ನೇತ್ರಾವತಿ ಕೊಳ್ಳದ ನೀರು ಹರಿದು ಬರಲಿದ್ದು, ರೈತರ ಕೃಷಿಗೆ ಹೊಸ ಜೀವ ತುಂಬಲಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲದೆ, ಕೃಷಿ ಚಟುವಟಿಕೆಗಳು ವಿಸ್ತಾರವಾಗಿ, ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ. ಮುಂದಿನ ಪೀಳಿಗೆಗೂ ನೀರಿನ ಕೊರತೆ ಉಂಟಾಗದಂತೆ ಶಾಶ್ವತ ವ್ಯವಸ್ಥೆ ನಿರ್ಮಾಣ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎತ್ತಿನಹೊಳೆ ವರದಾನ: ಕೋಡಿಶ್ರೀ
ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಬರಪೀಡಿತ ಅರಸೀಕೆರೆ ತಾಲೂಕಿಗೆ ಎತ್ತಿನಹೊಳೆ ಯೋಜನೆ ನಿಜಕ್ಕೂ ವರದಾನವಾಗಿದ್ದು, ಇದು ಶಾಸಕ ಶಿವಲಿಂಗೇಗೌಡರ ಅವಿರತ ಹೋರಾಟದ ಪ್ರತಿಫಲವಾಗಿದೆ. ಒಂದು ಕಾಲದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಪಡುವಂತಿದ್ದ ಈ ಭಾಗದ ಜನರ ಸಂಕಷ್ಟವನ್ನು ಅವರು ಹೃದಯಂಗಮವಾಗಿ ಅರಿತು, ನಿರಂತರವಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದ ಪರಿಣಾಮ ಇಂದು ಯೋಜನೆ ಸಾಕಾರವಾಗುವ ಹಂತಕ್ಕೆ ಬಂದಿದೆ.
ಶಾಸಕ ಶಿವಲಿಂಗೇಗೌಡರು ಕೇವಲ ರಾಜಕೀಯ ನಾಯಕನಾಗಿ ಮಾತ್ರವಲ್ಲ, ಜನಸೇವಕನಾಗಿ ಕೆಲಸ ಮಾಡಿ, ತಾಲೂಕಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೀರಾವರಿ ವ್ಯವಸ್ಥೆ ರೂಪಿಸುವ ದಿಟ್ಟ ಸಂಕಲ್ಪ ತೋರಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಅರಸೀಕೆರೆ ತಾಲೂಕು ಸಂಪೂರ್ಣವಾಗಿ ನೀರಾವರಿ ಸೌಲಭ್ಯ ಹೊಂದಿದ ಪ್ರದೇಶವಾಗಿ ರೂಪಾಂತರಗೊಳ್ಳಲಿದೆ. ಈ ಯೋಜನೆ ಯಶಸ್ವಿಯಾದರೆ ರೈತರ ಬದುಕಿನಲ್ಲಿ ಮಹತ್ತರ ಬದಲಾವಣೆ ತರಲಿದೆ ಮಾತ್ರವಲ್ಲ, ಬರಪೀಡಿತ ಪ್ರದೇಶವನ್ನು ಸಮೃದ್ಧ ನಾಡಾಗಿ ಪರಿವರ್ತಿಸುವ ಶಕ್ತಿಯನ್ನೂ ಹೊಂದಿದೆ ಎಂದರು.
ಇಂತಹ ಮಹತ್ವಾಕಾಂಕ್ಷಿ ಯೋಜನೆಗಾಗಿ ಅವರು ತೋರಿದ ಪರಿಶ್ರಮ, ತ್ಯಾಗ ಮತ್ತು ನಿರಂತರ ಪ್ರಯತ್ನಗಳು ಇತಿಹಾಸದಲ್ಲಿ ದಾಖಲೆಯಾಗಲಿವೆ. ಶಿವಲಿಂಗೇಗೌಡರ ಈ ಹೋರಾಟವೇ ಅರಸೀಕೆರೆ ತಾಲೂಕಿನ ಅಭಿವೃದ್ಧಿಗೆ ದಿಕ್ಕು ತೋರಿಸುವ ದೀಪವಾಗಿ ಉಳಿಯಲಿದೆ ಎಂದು ಸ್ವಾಮೀಜಿ ಪ್ರಶಂಸಿಸಿದರು.ಶಾಶ್ವತ ಪರಿಹಾರ:
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್ ಮಾತನಾಡಿ ಎರಡು ನದಿಗಳು ಹರಿದರೂ ನೀರಾವರಿ ಸೌಲಭ್ಯವಿಲ್ಲದೆ ಸಂಕಷ್ಟದಲ್ಲಿದ್ದ ತಾಲೂಕಿನ ಜನತೆಗೆ ಈ ಯೋಜನೆ ಶಾಶ್ವತ ಪರಿಹಾರ ನೀಡಲಿದೆ. ಮುಂದಿನ ಹಲವು ದಶಕಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಶಿವಲಿಂಗೇಗೌಡರ ಪ್ರಯತ್ನಗಳಿಂದ ಬರ ಪ್ರದೇಶಕ್ಕೆ ನೀರು ಹರಿಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ. ಶಶಿಧರ್, ಕಾಂಗ್ರೆಸ್ ಮುಖಂಡರಾದ ಅಡವಿಸ್ವಾಮಿ, ಶಿವಶಂಕರ್, ಜಿಪಂ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಮಾಜಿ ಸದಸ್ಯ ಸ್ವಾಮಿ, ಎತ್ತಿನಹೊಳೆ ಯೋಜನೆಯ ಎಇಇ ಆನಂದ್, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.
===*ಬಾಕ್ಸ್:
ಕಾನೂನು ತೊಡಕಿನಿಂದ ಯೋಜನೆ ಸ್ಥಗಿತಮಧ್ಯ ಕರ್ನಾಟಕದ ಹತ್ತಾರು ಜಿಲ್ಲೆಗಳ ಜನತೆಗೆ ಕುಡಿಯುವ ನೀರಿನ ಭರವಸೆ ಮೂಡಿಸಿರುವ ಈ ಯೋಜನೆಯಡಿ ಅರಣ್ಯ ಇಲಾಖೆಗೆ ಸೇರಿದ ಐದಳ್ಳ ಕಾವಲು ಪ್ರದೇಶದ ಮೂಲಕ ಹಾದು ಹೋಗುವ ಕಾಮಗಾರಿಗೆ ಕಾನೂನಾತ್ಮಕ ಅಡ್ಡಿಗಳು ಎದುರಾಗಿದ್ದವು. ಈ ಅಡೆತಡೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಕೇಂದ್ರ ಅರಣ್ಯ ಇಲಾಖೆಯೊಂದಿಗೆ ನಿರಂತರ ಪತ್ರ ವ್ಯವಹಾರ ನಡೆಸಿದ್ದು, ಕೊನೆಗೂ ಅನುಮತಿ ದೊರೆತ ಹಿನ್ನೆಲೆಯಲ್ಲಿ ಯೋಜನೆಗೆ ಹಸಿರು ನಿಶಾನೆ ದೊರಕಿದೆ.
------ಫೋಟೋ....ಅರಸೀಕೆರೆ ತಾಲೂಕಿನ ನಾಗೇನಹಳ್ಳಿ ಸಮೀಪದ ರಂಗನಾಥಸ್ವಾಮಿ ದೇವಾಲಯದ ಬಳಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಶಾಸಕ ಕೆ.ಎಂ. ಶಿವಲಿಂಗೇಗೌಡ, ಕೋಡಿ ಮಠದ ಶ್ರೀಗಳು ಮತ್ತಿತರರು ಭಾಗಿಯಾಗಿದ್ದರು.