ಈ ಯೋಜನೆಯಡಿಯಲ್ಲಿ ಜಿಲ್ಲೆಯ 4 ಪ್ಯಾಕೇಜ್ ಗಳ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಮೊದಲ ಪ್ಯಾಕೇಜ್‌ನಲ್ಲಿ ಗೌರಿಬಿದನೂರು ಭಾಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ । ಹಿರಿಯ ನಾಗರಿಕರು, ವಿಕಲಚೇತನರಿಗೆ ಸಲಕರಣೆ ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮುಂದಿನ ಒಂದು ವರ್ಷದೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆಯಿಂದ ನೀರು ಹರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರು ಮತ್ತು ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಊರುಗೋಲು, ಶ್ರವಣ ಸಾಧನ ಸೇರಿದಂತೆ ವಿವಿಧ ಸಾಧನ, ಸಹಾಯಕ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಯೋಜನೆಯಡಿಯಲ್ಲಿ ಜಿಲ್ಲೆಯ 4 ಪ್ಯಾಕೇಜ್ ಗಳ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಮೊದಲ ಪ್ಯಾಕೇಜ್‌ನಲ್ಲಿ ಗೌರಿಬಿದನೂರು ಭಾಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ. 90ರಷ್ಟು ಕಾಮಗಾರಿಯೂ ಮುಗಿದಿದೆ. ಉಳಿದ ತಾಲೂಕುಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಒಟ್ಟಾರೆ, ಮುಂದಿನ ಒಂದು ವರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆಯಿಂದ ನೀರು ಬರುತ್ತದೆ, ಕೆರೆಗಳನ್ನು ತುಂಬಿಸಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು.ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಈ ಯೋಜನೆ ಜಾರಿಗೆ ಸಾಕಷ್ಟು ಅನುದಾನವನ್ನು ನೀಡಿದ್ದರು. ಅದೇ ರೀತಿ, ಈಗಿನ ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎತ್ತಿನಹೊಳೆಗೆ ಅಗತ್ಯವಿರುವಷ್ಟು ಹಣವನ್ನು ನೀಡಲು ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿದ್ದು- ಡಿಕೆಶಿ ಜೋಡೆತ್ತುಗಳು:ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಪ್ರಮುಖ ಕಾರಣರಾಗಿದ್ದಾರೆ. ಅವರಿಬ್ಬರೂ ನಮ್ಮ ಪಕ್ಷದಲ್ಲಿ ಜೋಡೆತ್ತುಗಳಿದ್ದಂತೆ. ಇಬ್ಬರೂ ಸೇರಿ ರಾಜ್ಯದ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಇಡೀ ರಾಜ್ಯಕ್ಕೆ ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ಅಧಿಕಾರಕ್ಕೆ ಬಂದ ದಿನವೇ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಐದು ಯೋಜನೆಗಳನ್ನು ಘೋಷಣೆಗಳನ್ನು ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರಕ್ಕೆ 2977 ಕೋಟಿ:ಚಿಕ್ಕಬಳ್ಳಾಪುರ ಜಿಲ್ಲೆಗೆ ಇದುವರೆಗೆ ಅನ್ನಭಾಗ್ಯಕ್ಕೆ 265 ಕೋಟಿ, ಗೃಹಲಕ್ಷ್ಮಿ ಯೋಜನೆಯಡಿ 1758 ಕೋಟಿ, ಗೃಹಜ್ಯೋತಿಗೆ 454 ಕೋಟಿ, ಶಕ್ತಿಗೆ 481 ಕೋಟಿ ಮತ್ತು ಯುವನಿಧಿಗೆ 17 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಮೂಲಕ ಮೂರು ವರ್ಷದ ಮೂರು ತಿಂಗಳಲ್ಲಿ ಜಿಲ್ಲೆಗೆ ಬರೋಬ್ಬರಿ 2977 ಕೋಟಿ ರುಪಾಯಿಗಳನ್ನು ವಿತರಿಸಿದೆ ಎಂದರು.ಬಾಕ್ಸ್:ರಾಜ್ಯ ಸರ್ಕಾರದಿಂದಲೂ ವಿಕಲಚೇತನರಿಗೆ ಸೌಲಭ್ಯ ವಿತರಣೆವಿಕಲಚೇತನರಿಗೆ ಅನುಕಂಪ ತೋರಿಸುವುದಲ್ಲ. ಈ ವರ್ಗದವರು ಸ್ವಾವಲಂಬನೆಯ ಜೀವನ ಸಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ ಜಂಟಿಯಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿವೆ. ಆರು ತಿಂಗಳೊಳಗೆ 2 ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಸಂಧರ್ಭದಲ್ಲಿ ಸಂಸದ ಡಾ.ಕೆ.ಸುಧಾಕರ್,ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಅಲಿಮ್ಕೋ ಸಂಸ್ಥೆಯ ರಾಜೇಶ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್.ರಮೇಶ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಇತರರಿದ್ದರು.ಸಿಕೆಬಿ-1 ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ನಡೆದ ಹಿರಿಯ ನಾಗರೀಕರು ಮತ್ತು ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರವಾಹನ,ಊರುಗೋಲು, ಶ್ರವಣ ಸಾಧನ ಸೇರಿದಂತೆ ವಿವಿಧ ಸಾಧನ, ಸಹಾಯಕ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದರು