ಆಳ್ವಾಸ್ ಕಾಲೇಜಿನ ಡಾ. ಕೆ ಶಿವರಾಮ ಕಾರಂತ ವೇದಿಕೆಯಲ್ಲಿ ಚಿಗುರು ವಿದ್ಯಾರ್ಥಿ ವೇದಿಕೆ ವತಿಯಿಂದ ಯೋಧ ನಮನ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಅದು ದೇಶದ ರಕ್ಷಣೆಗಾಗಿ ಸಮರ್ಪಣೆಯಾದರೆ ಅದಕ್ಕಿಂತ ದೊಡ್ಡ ಹೆಮ್ಮೆ ಮತ್ತೊಂದಿಲ್ಲ ಎಂದು ಭಾರತೀಯ ನಿವೃತ್ತ ಸೇನಾಧಿಕಾರಿ ಹವಾಲ್ದಾರ ಯೋಗೀಶ್ ಪೂವಯ್ಯ ಹೇಳಿದರು.ಅವರು ಆಳ್ವಾಸ್ ಕಾಲೇಜಿನ ಡಾ. ಕೆ ಶಿವರಾಮ ಕಾರಂತ ವೇದಿಕೆಯಲ್ಲಿ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಯೋಧ ನಮನ ಕಾರ್ಯಾಗಾರದಲ್ಲಿ ಮಾತನಾಡಿದರು. ಸೇನೆಯಲ್ಲಿ ನಾಯಕತ್ವವು ಬಹಳಮುಖ್ಯ. ನಾಯಕನಾಗಿ ತಂಡವನ್ನು ಮುನ್ನಡೆಸಿಕೊಂಡು ದೇಶವನ್ನು ಕಾಪಾಡುವುದು ಅವನ ಕರ್ತವ್ಯ. ಸೈನಿಕನಾಗಬೇಕಾದರೆ ದೇಹ ಬಲ ಒಂದೇ ಸಾಲದು. ಬುದ್ಧಿಬಲದ ಅವಶ್ಯಕತೆ ಕೂಡಾ ಬಹುಮುಖ್ಯ ಎಂದರು.

ಯೋಧ ಮಾತ್ರವಲ್ಲದೆ ಪ್ರತಿ ಒಬ್ಬ ಪ್ರಜೆಯೂ ಕೂಡಾ ದೇಶದ ಬಗ್ಗೆ ಯೋಚಿಸಿದಾಗ ದೇಶವು ಸುರಕ್ಷಿತವಾಗಿ ಇರಲು ಸಾಧ್ಯ. ನಮ್ಮ ಸೈನಿಕರು, ನಾಡಿಗಾಗಿ ಕೆಲಸ ಮಾಡುತ್ತಾರೆ. ಆದಾಯಕ್ಕಾಗಿ ಎಂದು ಅಲ್ಲ. ಪ್ರತಿ ಒಬ್ಬ ಸೈನಿಕನಲ್ಲೂ ಮಾತೃಭೂಮಿಯ ರಕ್ಷಣೆಯ ಜವಾಬ್ದಾರಿ ಇರುತ್ತದೆ ಎಂದರು. ಆಳ್ವಾಸ್ ಕಾಲೇಜಿನ ಕುಲಸಚಿವ- ಮೌಲ್ಯಮಾಪನ ಡಾ ನಾರಾಯಣ ಶೆಟ್ಟಿ ಎನ್‌ಪಿ ಮಾತನಾಡಿ, ಒಮ್ಮೆ ಸೈನಿಕ ಎಂದೆನಿಸಿಕೊಂಡರೆ ಆತ ಯಾವತ್ತಿಗೂ ಯೋಧನೆ. ನಾವು ನಡೆಯುವ ದಾರಿಯ ಬಗ್ಗೆ ನಮಗೆ ಸ್ಪಷ್ಟತೆ ಇದ್ದಾಗ ನಾವು ಸುಲಭವಾಗಿ ಗುರಿ ತಲುಪಬಲ್ಲೆವು ಎಂದು ತಿಳಿಸಿದರು. ಎನ್‌ಸಿಸಿ ನಮ್ಮಲ್ಲಿ ದೇಶ ಪ್ರೇಮವನ್ನು ತುಂಬುತ್ತದೆ. ಒಬ್ಬ ಸೈನಿಕನಲ್ಲಿ ಇರಬೇಕಾದಂತ ಧೈರ್ಯ ಎನ್‌ಸಿಸಿ ಕೆಡೆಟ್‌ಗಳಲ್ಲಿ ಇರುತ್ತದೆ. ಅವರಲ್ಲಿ ಯಾವುದೇ ಭಯ ಇಲ್ಲ. ಸವಾಲುಗಳನ್ನು ಎದುರಿಸಲು ಪ್ರಾಯೋಗಿಕ ತರಬೇತಿಗಳು ಸಹಾಯ ಮಾಡುತ್ತವೆ ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಅಂಕಿತಾ ಪರಾಡ್ಕರ್ ನಿರೂಪಿಸಿ, ಅನುಪಮ ಎಂ ಬಿ ವಂದಿಸಿದರು.