ಇಂದು ನಾವೆಲ್ಲಾ ಒತ್ತಡ ಬದುಕಿನಲ್ಲಿದ್ದೇವೆ, ಬಹು ಬೇಗ ಸಂಪತ್ತು ಗಳಿಸುವ ಧಾವಂತದಲ್ಲಿ ಆರೋಗ್ಯವನ್ನು ಕಡೆಗಣಿಸುತ್ತಿದ್ದೇವೆ

ಹೂವಿನಹಡಗಲಿ: ಇಂದು ಮನುಷ್ಯನಿಗೆ ಎಲ್ಲ ಸಂಪತ್ತಿದೆ, ಆದರೆ ಆರೋಗ್ಯ ಸಂಪತ್ತು ದೂರವಾಗಿದೆ. ನಮಗೆ ದೈಹಿಕ, ಮಾನಸಿಕ ನೆಮ್ಮದಿ ಹೊಂದಲು ಯೋಗವೇ ರಹದಾರಿಯಾಗಿದೆ ಎಂದು ಗವಿಸಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.

ಇಲ್ಲಿನ ಪತಂಜಲಿ ಯೋಗ ಸಮಿತಿ, ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್, ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ, ಇತರೆ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ, ಸಕ್ಕರೆ ಕಾಯಿಲೆ ಬೊಜ್ಜು ನಿವಾರಣೆಗೆ ಏಳು ದಿನಗಳ ವಿಶೇಷ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇಂದು ನಾವೆಲ್ಲಾ ಒತ್ತಡ ಬದುಕಿನಲ್ಲಿದ್ದೇವೆ, ಬಹು ಬೇಗ ಸಂಪತ್ತು ಗಳಿಸುವ ಧಾವಂತದಲ್ಲಿ ಆರೋಗ್ಯವನ್ನು ಕಡೆಗಣಿಸುತ್ತಿದ್ದೇವೆ ಆರೋಗ್ಯ ಕೈ ಕೊಟ್ಟಾಗ ಸರಿ ಮಾಡಿಕೊಳ್ಳಲು ಗಳಿಸಿಟ್ಟ ಸಂಪತ್ತು ಕರಗಿ ಹೋಗುತ್ತದೆ. ಚಕ್ರವರ್ತಿ ಅಶೋಕ ಸಾಮ್ರಾಟ್‌ ನೆಮ್ಮದಿಗಾಗಿ ತನ್ನ ಸಾಮ್ರಾಜ್ಯವನ್ನೇ ತ್ಯಜಿಸುವ ಮೂಲಕ, ವೈರಾಗ್ಯ ತಾಳಿದ್ದು ಇತಿಹಾಸದಲ್ಲಿದೆ. ನಾವು ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡುವುದರ ಜತೆಗೆ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ ಧ್ಯಾನ ಪ್ರಾಣಾಯಾಮ, ಸತ್ಸಂಗ ಮೈಗೂಡಿಸಿಕೊಂಡು ನೆಮ್ಮದಿಯ ಬದುಕಿಗೆ ಸಿದ್ದರಾಗಬೇಕು, ಆರೋಗ್ಯವಂತ ಸಮಾಜಕ್ಕಾಗಿ ಶ್ರಮಿಸುವ ಪತಂಜಲಿ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.

ಜಿಬಿಆರ್ ಕಾಲೇಜ್ ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಉದ್ಘಾಟಿಸಿ ಮಾತನಾಡಿ, ಸಂಪತ್ತಿನ ಗಳಿಕೆಯ ಭರದಲ್ಲಿ ಸಾಮಾಜಿಕ ಮೌಲ್ಯ ನಮ್ಮಿಂದ ಮರೆಯಾಗುತ್ತಿವೆ, ಇದನ್ನ ತಡೆಯಲು ಯೋಗ ಸಹಕಾರಿಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಶಿಬಿರಗಳು ಇದು ಮಕ್ಕಳಗೆ ತುರ್ತು ಅಗತ್ಯವಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಯೋಗ ಧ್ಯಾನ ಪ್ರಾಣಾಯಾಮಗಳ ಮೂಲಕ ಮೌಲ್ಯಗಳನ್ನು ತಿಳಿಸುವ ಕಾರ್ಯ ಆಗಬೇಕಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ. ಲಕ್ಷ್ಮಣ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕ್ಕರೆ ಕಾಯಿಲೆ ಮತ್ತು ಬೊಜ್ಜು ‌ಅನಾರೋಗ್ಯ ಸಮಸ್ಯೆ ಸಾಕಷ್ಟು ಜನರನ್ನು ಬಾಧಿಸುತ್ತಿದೆ. ಯೋಗದಿಂದ ಇದಕ್ಕೆ ಪರಿಹಾರ ಸಾಧ್ಯವಿದ್ದು, ಪತಂಜಲಿ ಪರಿವಾರದ ಸಹಕಾರದಿಂದ ಶಿಬಿರ ಆಯೋಜಿಸಿದೆ. ಬರುವ ದಿನಗಳಲ್ಲಿ ಅನೇಕ ವಿಶೇಷ ಶಿಬಿರ ಆಯೋಜಿಸುವ ಚಿಂತನೆ ಮಾಡಿದ್ದೇವೆ ಎಂದರು.

ಈ.ಸತ್ಯಪ್ಪ, ರಾಜೇಶ್ ಕರ್ವಾ, ಅನಂತ ಜೋಶಿ, ಕೋಡಿಹಳ್ಳಿ ಕೊಟ್ರೇಶ್, ಭರತ್ ಕುಮಾರ ಚವ್ಹಾಣ, ಕೆ.ನಾಗರಾಜ, ಕೆ.ಎಂ.ವಾಗೀಶ್, ಇಂದುಮತಿ ನಾಯ್ಕ ಇದ್ದರು.