ಸಾರಾಂಶ
ಯೋಗಕ್ಕೆ ಅದರದ್ದೇ ಆದ ಮಹತ್ವವಿದೆ. ಇಂದಿನ ಯೋಗ ದಿನಾಚರಣೆಯಲ್ಲಿ ಬಹುಪಾಲು ಶಿಕ್ಷಕರಿದ್ದು, ಒಳ್ಳೆಯದು ಯಾವುದೆಂಬುದನ್ನು ಗುರುತಿಸುವ ಶಕ್ತಿಯಿದೆ. ಮಕ್ಕಳು ಹಾಗೂ ಹಿರಿಯರು ಪ್ರತಿನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯವಂತ ಜೀವನ ನಡೆಸಬಹುದು.
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.ತಾಲೂಕಿನ ಶೀರಪಟ್ಟಣ (ಎಂ.ಹೊಸೂರು ಗೇಟ್) ಬಳಿ/ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಆವರಣದಲ್ಲಿ ಶನಿವಾರ ಬೆಳಗ್ಗೆ ಪತಂಜಲಿ ಮಹರ್ಷಿಯವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಯೋಗಕ್ಕೆ ಅದರದ್ದೇ ಆದ ಮಹತ್ವವಿದೆ. ಇಂದಿನ ಯೋಗ ದಿನಾಚರಣೆಯಲ್ಲಿ ಬಹುಪಾಲು ಶಿಕ್ಷಕರಿದ್ದು, ಒಳ್ಳೆಯದು ಯಾವುದೆಂಬುದನ್ನು ಗುರುತಿಸುವ ಶಕ್ತಿಯಿದೆ. ಮಕ್ಕಳು ಹಾಗೂ ಹಿರಿಯರು ಪ್ರತಿನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯವಂತ ಜೀವನ ನಡೆಸಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಯೋಗಾಭ್ಯಾಸ ಅನುಕೂಲವಾಗುತ್ತದೆ ಎಂದರು.ಶಾಲಾ ಹಂತದಲ್ಲಿಯೇ ಮಕ್ಕಳು ಯೋಗ ಮಾಡುವುದನ್ನು ಅಭ್ಯಾಸ ಮಾಡಿದಲ್ಲಿ ಕಲಿಕಾ ಗುಣಮಟ್ಟವೂ ಹೆಚ್ಚಾಗಿ, ಶಿಸ್ತು, ಸಂಯಮ ಹಾಗೂ ತಾಳ್ಮೆಯನ್ನು ಮೈಗೂಡಿಸಿಕೊಂಡು ದೇಹದ ಎಲ್ಲ ಅಂಗಾಂಗಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹು ಎಂದರು.
ಯಶಸ್ಸು ಎಂದರೆ ಕೇವಲ ಹಣ ಆಸ್ತಿ ಸಂಪಾದಿಸುವುದಲ್ಲ. ಉತ್ತಮ ಆರೋಗ್ಯ ನಿಜವಾದ ಯಶಸ್ಸು. ದೈಹಿಕ ಮತ್ತು ಮಾನಸಿಕ ಆರೋಗ್ಯವಂತರಾಗಿರುವ ಸಾಮಾನ್ಯ ಮನುಷ್ಯನಿಗೆ ಕಲ್ಲುಬಂಡೆಯ ಮೇಲೆ ಮಲಗಿದರೂ ನಿದ್ರೆ ಬರುತ್ತದೆ. ಆಧುನಿಕ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ತಿಳಿಸಿದರು.ಹಿರಿಯ ಯೋಗಪಟು ನಾರಾಯಣಸ್ವಾಮಿ ಮತ್ತು ಅನುಸಂಧಾನ ಸಂಸ್ಥಾನದ ನೋಡಲ್ ಅಧಿಕಾರಿ ಡಾ.ಎಚ್.ಎಸ್. ವಾದಿರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 500 ಕ್ಕೂ ಹೆಚ್ಚು ಯೋಗಾಭ್ಯಾಸಿಗಳಿಗೆ ಆಸ್ಪತ್ರೆ ವತಿಯಿಂದ ಉಚಿತವಾಗಿ ಟೀ ಶರ್ಟ್ ಮತ್ತು ಯೋಗ ಮ್ಯಾಟ್ ವಿತರಿಸಿ ಹಲವು ಭಂಗಿಯ ಯೋಗಾಸನ ಕುರಿತು ಆಸ್ಪತ್ರೆಯ ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ ತರಬೇತಿ ನೀಡಿದರು.ಬಳಿಕ ಪಟ್ಟಣದ ರೋಟರಿ ಶಾಲೆ, ಗದ್ದೇಭೂವನಹಳ್ಳಿಯ ಋಷಿ ವಿದ್ಯಾ ಸಂಸ್ಥೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ತೆರಳಿ ಎಲ್ಲ ವಿದ್ಯಾರ್ಥಿಗಳಿಗೆ ಟೀ ಶರ್ಟ್ ಮತ್ತು ಯೋಗ ಮ್ಯಾಟ್ ನೀಡುವ ಜೊತೆಗೆ ಯೋಗಾಭ್ಯಾಸ ಮಾಡಿಸಲಾಯಿತು.
ಈ ವೇಳೆ ಆಸ್ಪತ್ರೆ ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಫಿಜಿಯೋ ತೆರಪಿಸ್ಟ್ ರಮ್ಯ, ವೈದ್ಯರಾದ ಡಾ.ಸ್ವಾತಿ, ಡಾ.ಇನ್ಬುರಾಜ್, ಡಾ. ನಿತೇಶ್, ಡಾ. ಸಿಂಧೂಶ್ರೀ, ಡಾ.ಕಾರ್ತಿಕ್, ಡಾ.ರಘುರಾಂ, ಇಂಜಿನೀಯರ್ ನಾಗೇಶ್, ಕಚೇರಿ ಸಿಬ್ಬಂದಿಗಳಾದ ಚೈತ್ರ, ಎಂ.ಪ್ರಗತಿ, ಟಿ.ಎ. ಶಿವರಾಜ್, ಯಶ್ವಂತ್ ಸೇರಿದಂತೆ ಐನೂರಕ್ಕೂ ಹೆಚ್ಚು ಜನರು ಇದ್ದರು.