ಸಾರಾಂಶ
ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯವೃಂದ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಖಿನ್ನತೆಯ ನಿವಾರಣೆಗೆ ಅಷ್ಟಾಂಗ ಯೋಗಗಳು ಸಹಕಾರಿ. ಸಕಾರಾತ್ಮಕ ಮನಸ್ಸಿನ, ಆರೋಗ್ಯವಂತ ವ್ಯಕ್ತಿಯು ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಬಲ್ಲ. ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಯೋಗ ಆರೋಗ್ಯವರ್ಧಕ ಹಾಗೂ ರೋಗ ನಿವಾರಕ ಎಂದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಂತಾರಾಷ್ಟ್ರೀಯ ಯೋಗ ತೀರ್ಪುಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು.
ಅವರು ಕೊಡಿಯಾಲಬೈಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.ಯೋಗ ಮತ್ತು ಧ್ಯಾನದ ಮೂಲಕ ಪ್ರತಿಯೊಬ್ಬರೂ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಪಡೆಯಬಹುದು. ಎಲ್ಲರೂ
ಯೋಗವನ್ನು ತಮ್ಮ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು. ವಿದ್ಯಾರ್ಥಿಗಳು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಾಧ್ಯ ಎಂದರು.ಈ ಸಂದರ್ಭ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯವೃಂದ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್ ಪ್ರಾಸ್ತಾವಿಕ ಮಾತನಾಡಿದರು.